ADVERTISEMENT

ಸರ್ವಋತು ಜಲಪಾತ ಯೋಜನೆಯಿಂದ ಪರಿಸರ ನಾಶ: ಅಖಿಲೇಶ್ ಚಿಪ್ಪಳಿ

ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 3:18 IST
Last Updated 6 ಜುಲೈ 2021, 3:18 IST
ಅಖಿಲೇಶ್ ಚಿಪ್ಪಳಿ
ಅಖಿಲೇಶ್ ಚಿಪ್ಪಳಿ   

ಸಾಗರ: ಸರ್ವಋತು ಜೋಗ ಜಲಪಾತ ಯೋಜನೆಯಿಂದ ಸುತ್ತಲಿನ ಪರಿಸರ ನಾಶಗೊಳ್ಳುವುದು ಖಚಿತ. ಆದ್ದರಿಂದ ಈ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು ಎಂದು ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಒತ್ತಾಯಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನವಶ್ಯಕ ಅಭಿವೃದ್ಧಿ ಯೋಜನೆಗಳು ಪಶ್ಚಿಮ ಘಟ್ಟವನ್ನು ವಿನಾಶದಂಚಿಗೆ ತಂದು ನಿಲ್ಲಿಸಿವೆ. ಹವಾಗುಣ ಬದಲಾವಣೆ ಎಂಬ ಇಂದಿನ ತುರ್ತು ಪರಿಸ್ಥಿತಿಯಲ್ಲಿ ಈಗಿರುವ ಅರಣ್ಯ ಪ್ರದೇಶಗಳನ್ನು ಉಳಿಸಿಕೊಳ್ಳುವುದು ತೀರಾ ಮುಖ್ಯ.ಸರ್ವಋತು ಜಲಪಾತ ಯೋಜನೆ ಜಾರಿಯಾದರೆ ಪಶ್ಚಿಮ ಘಟ್ಟದ ದಟ್ಟ ಅರಣ್ಯ ಪ್ರದೇಶ
ವ್ಯಾಪಕ ಪ್ರಮಾಣದಲ್ಲಿ ನಾಶವಾಗಲಿದೆ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುವ ಇಂತಹ ಯೋಜನೆಗಳ ಅಗತ್ಯ
ವಿಲ್ಲ’ ಎಂದು ಪ್ರತಿಪಾದಿಸಿದರು.

ಇಂಧನ ತಜ್ಞ ಶಂಕರಶರ್ಮ, ‘ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಶೇ 33ರಷ್ಟು ಅರಣ್ಯ ಪ್ರದೇಶವಿರಬೇಕು. ನಮ್ಮ ರಾಜ್ಯದಲ್ಲಿ ಹಾಲಿ ಶೇ 20ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಸರ್ಕಾರ ಈಗಿರುವ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳುವ ಜೊತೆಗೆ ಹೊಸದಾಗಿ ಬೆಳೆಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೇ ಹೊರತು ಅರಣ್ಯ ಪ್ರದೇಶವನ್ನು ಕಡಿಮೆ ಮಾಡುವಂತಹ ಯೋಜನೆಯತ್ತ ತನ್ನ ಚಿತ್ತ ಹರಿಸಬಾರದು’ ಎಂದರು.

ADVERTISEMENT

ಸರ್ವಋತು ಜಲಪಾತ ಯೋಜನೆಯಡಿ ಅಣೆಕಟ್ಟುಗಳನ್ನು ಕಟ್ಟುವುದರಿಂದ ಅರಣ್ಯ ನಾಶವಾಗುತ್ತದೆ. ನೀರನ್ನು ಮೇಲಕ್ಕೆತ್ತುವ ಯೋಜನೆಯಿಂದ ವಿದ್ಯುತ್ ಅಪವ್ಯಯಗೊಳ್ಳುತ್ತದೆ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಬಿ. ಆರ್. ವಿಜಯವಾಮನ್, ‘ಜೋಗದ ನೈಸರ್ಗಿಕ ಸೌಂದರ್ಯವನ್ನು ಹಾಳುಮಾಡುವ ಸರ್ವಋತು ಜಲಪಾತ ಯೋಜನೆ ಖಂಡಿತ ಬೇಡ. ಆರ್ಥಿಕವಾಗಿ ಸಾಧುವಲ್ಲದ ಈ ಯೋಜನೆಯಿಂದ ಕೆಲವೇ ಜನರ ಹೊರತಾಗಿ ಯಾರಿಗೂ ಪ್ರಯೋಜನವಿಲ್ಲ’
ಎಂದು ಹೇಳಿದರು.‌

ಪರಿಸರ ನಾಶದಿಂದ ಕಳೆದ ವರ್ಷ ಜೋಗ ಜಲಪಾತ ಸಮೀಪದ ಬ್ರಿಟಿಷ್ ಬಂಗಲೆಯ ಕೆಳಭಾಗದಲ್ಲಿರುವ ಗುಡ್ಡ ಕುಸಿದಿತ್ತು. ಪರಿಸರಕ್ಕೆ ಮಾರಕವಾದ ಯೋಜನೆಗಳು ಅಲ್ಲಿಗೆ ಬಂದರೆ ದೊಡ್ಡ ಅನಾಹುತವಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.