ADVERTISEMENT

ಕುಲದ ನೆಲೆ ಮರೆತು ಸಮಸಮಾಜ ಕಟ್ಟೋಣ

ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 5:11 IST
Last Updated 14 ನವೆಂಬರ್ 2022, 5:11 IST
ಶಿವಮೊಗ್ಗದಲ್ಲಿ ಭಾನುವಾರ ಪತಂಜಲಿ ಸಂಸ್ಥೆಯ ಬೆಳ್ಳಿ ಹಬ್ಬ ಆಚರಣೆ ಸಮಾರಂಭದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು
ಶಿವಮೊಗ್ಗದಲ್ಲಿ ಭಾನುವಾರ ಪತಂಜಲಿ ಸಂಸ್ಥೆಯ ಬೆಳ್ಳಿ ಹಬ್ಬ ಆಚರಣೆ ಸಮಾರಂಭದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು   

ಶಿವಮೊಗ್ಗ: ಜಲವೇ ಸಕಲ ಕುಲಕ್ಕೆ ತಾಯಿಯಲ್ಲವೇ. ಆ ಜಲದ ಕುಲದ ನೆಲೆಯನೇನಾದರೂ ಬಲ್ಲಿರಾ? ಎಂದು ಹೇಳಿದ ಕನಕದಾಸರ ಸಮ ಸಮಾಜದ ಕಲ್ಪನೆಯನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸೋಣ ಎಂದು ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಆಶಿಸಿದರು.

ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯಿಂದ ಕನಕದಾಸರ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಕನಕ ಕಥಾಕೀರ್ತನ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದೇವರು ಯಾವತ್ತೂ ತಾರತಮ್ಯ ಮಾಡುವುದಿಲ್ಲ. ಮನುಷ್ಯ ಮಾತ್ರ ಆ ಕೆಲಸ ಮಾಡುತ್ತಾನೆ. ನಮ್ಮ ದೇವರು ಬೇರೆ. ನಿಮ್ಮ ದೇವರು ಬೇರೆ, ಮೇಲು–ಕೀಳು, ದೊಡ್ಡ ಜಾತಿ –ಸಣ್ಣ ಜಾತಿ, ನೀವು ಹಂಗೇ ಇರಬೇಕು. ನಾವು ಹಿಂಗೆ ಇರಬೇಕು ಈ ಭಾವನೆಗಳನ್ನು ಬೆಳೆಸಿಕೊಂಡಿದ್ದಾನೆ. ಅವು ನಿವಾರಣೆಯಾಗಿ ಸಮಸಮಾಜದ ಕಲ್ಪನೆ ಎಲ್ಲರೂ ಕಟ್ಟಿಕೊಳ್ಳಬೇಕು ಎಂದರು.

ADVERTISEMENT

ಜಾತಿ ವ್ಯವಸ್ಥೆ ಈ ದೇಶಕ್ಕೆ ಅಂಟಿರುವ ದೊಡ್ಡ ಶಾಪ. ಅಸ್ಪೃಶ್ಯತೆ ಇವತ್ತೂ ಜಾರಿಯಲ್ಲಿದೆ. ದಲಿತರ ಮನೆಯ ಹಾಲು ಹಾಲೇ. ನಮ್ಮ ಮನೆಯ ಹಾಲೂ ಹಾಲೇ. ನಾಯಿಗೆ ನಾರಾಯಣ ಅನ್ನುತ್ತೇವೆ. ಗೌರವಿಸುತ್ತೇವೆ. ಪ್ರಾಣಿ ಪಕ್ಷಿಗಳನ್ನು ಗೌರವಿಸುತ್ತೇವೆ. ಮನುಷ್ಯ ಮನುಷ್ಯನನ್ನು ಗೌರವಿಸೊಲ್ಲ. ಈ ಮನಸ್ಥಿತಿ ಹೋಗಬೇಕಿದೆ ಎಂದು ಹೇಳಿದರು.

ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ದೇಶದಲ್ಲಿ ಸಾವಿರಾರು ಜಾತಿ–ಧರ್ಮ ಇವೆ. ಯಾವುದೇ ಜಾತಿ–ಧರ್ಮ ಶಾಂತಿ ಕದಡುವಂತೆ ಯಾರಿಗೂ ಹೇಳೊಲ್ಲ. ಹಿಂದೂ ಧರ್ಮ ಸರ್ವೇ ಜನ ಸುಖಿನೋ ಭವಂತು ಎಂದು ಹೇಳಿದೆ ಎಂದರು.

‘ದೇಶ–ಧರ್ಮ ಒಂದು ಎಂದು ಹೇಳಿದ ಕನಕದಾಸರ ಸಿದ್ಧಾಂತ ಮೈಗೂಡಿಕೊಳ್ಳಲು ತೀರ್ಮಾನಿಸಿ ಪತಂಜಲಿ ಪ್ರಕೃತಿ ಸಂಸ್ಥೆ ನೇತೃತ್ವದಲ್ಲಿ ಪತಂಜಲಿ ನಾಗರಾಜ್ ಎಲ್ಲರನ್ನೂ ಒಟ್ಟಿಗೆ ಸೇರಿಸಿ ವಿಶೇಷ ಕಾರ್ಯಕ್ರಮ. ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುವೆ’ ಎಂದರು.

ಮುಂದುವರಿದ ರಾಷ್ಟ್ರಗಳಲ್ಲಿ ಹಣ, ವಿದ್ಯೆ, ಅಧುನಿಕತೆ ಯಾವುದೂ ಕಡಿಮೆ ಇಲ್ಲ. ಆದರೂ ಅವರ ಮನಸ್ಸಿಗೆ ನೆಮ್ಮದಿ, ಶಾಂತಿ ಇಲ್ಲ. ಏಕೆಂದರೆ ಅವರಿಗೆ ಆಧ್ಯಾತ್ಮ ಗೊತ್ತಿಲ್ಲ. ಆಧ್ಯಾತ್ಮ ಅಂದರೆ ಇನ್ನೊಬ್ಬರಿಗೆ ತೊಂದರೆ ಕೊಡದೇ ನಮ್ಮ ಕುಟುಂಬ ನಮ್ಮ ದುಡಿಮೆಯಲ್ಲಿಯೇ ಬದುಕಿ ಸ್ವಲ್ಪವಾದರೂ ಸಮಾಜ ಸೇವೆ ಮಾಡಲು ಪ್ರೇರಣೆ ಕೊಡುವುದಾಗಿದೆ ಎಂದು ಈಶ್ವರಪ್ಪ
ತಿಳಿಸಿದರು.

ಕನಕದಾಸರ ಕೀರ್ತನೋತ್ಸವ ಅಂಗವಾಗಿ ಹಾಲುಮತ ಸಂಸ್ಕೃತಿಯ ಕನಕ ಕಲಾವೈಭವ ಗೀತಾಗಾಯನ ನೃತ್ಯರೂಪಕ ಕಾರ್ಯಕ್ರಮ ಹಾಗೂ 25 ಜಾನಪದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶ್ರೀಕಾಂತ್, ಹಾಲುಮತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಿ.ಟಿ. ಪ್ರಶಾಂತ್, ಜಿಲ್ಲಾ ಘಟಕದ ಅಧ್ಯಕ್ಷ ದಾನೇಶ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಮುಖಂಡರಾದ ಪರಿಸರ ರಮೇಶ್, ಗಣೇಶ ಬೀಳಗಿ, ಡಾ.ಎನ್‌.ಎಲ್‌.ನಾಯಕ್, ವೈ.ಎಚ್.ನಾಗರಾಜ್, ಪತಂಜಲಿ ಸಂಸ್ಥೆಯ ಸಂಚಾಲಕ ನಾಗರಾಜ್‌, ಅಧ್ಯಕ್ಷ ಎಂ.ಎನ್.ಸುಂದರರಾಜ್, ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ, ಉಪಾಧ್ಯಕ್ಷ ಡಾ.ಪಿ.ಬಾಲಪ್ಪ, ಯೋಜನಾಧಿಕಾರಿ ಟಿ.ಸಿ.ವಿಜಯಭಾಸ್ಕರ್, ಆಡಳಿತಾಧಿಕಾರಿ ಎಂ.ಪೂವಯ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಿಸರ ಸಿ.ರಮೇಶ್, ನಿರ್ದೇಶಕರಾದ ಭವಾನಿ ಶಂಕರರಾವ್, ಸುಶೀಲಾ, ಜಾನಪದ ಕಲಾ
ಕೇಂದ್ರದ ಅಧ್ಯಕ್ಷ ಜಿ.ಈ.ಶಿವಾನಂದಪ್ಪ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.