ADVERTISEMENT

ಕೆರೆಗಳ ಭರ್ತಿ ಸುದ್ದಿಗೆ ಈಶ್ವರಪ್ಪ ಶ್ಲಾಘನೆ

ಪ್ರಜಾವಾಣಿ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 18:53 IST
Last Updated 31 ಆಗಸ್ಟ್ 2020, 18:53 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ‘ಲಾಕ್ ಡೌನ್‌ನಲ್ಲಿ ಹೊಳೆತ್ತಿದ್ದ ಕೆರೆಗಳ ಭರ್ತಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಯಲ್ಲಿ ಉದ್ಯೋಗಖಾತ್ರಿ ಯೋಜನೆಯಲ್ಲಿ ತೊಡಗಿರುವ ಎಲ್ಲರಿಗೂ ಸ್ಫೂರ್ತಿ ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಶ್ಲಾಘಿಸಿದ್ದಾರೆ.

‘ನಮ್ಮ ಇಲಾಖೆಯ ಅಧಿಕಾರಿಗಳು ಇರಬಹುದು. ಉದ್ಯೋಗ ಖಾತ್ರಿಯಲ್ಲಿ ಭಾಗವಹಿಸಿರುವಂತಹ ಕೂಲಿ ಕಾರ್ಮಿಕರು ಇರಬಹುದು, ಎಲ್ಲರಿಗೂ ಸಂತೋಷವಾಗಿದೆ’ ಎಂದು ಸಚಿವರು ಸೋಮವಾರ ಪತ್ರ ಬರೆದಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯ ಮೂಲ ಉದ್ದೇಶ ಹಸಿವಿನಿಂದ ಯಾರೂ ಬಳಲಬಾರದು ಎಂಬುದಾಗಿದೆ. ಅದಲ್ಲದೇ ಹೊರದೇಶದಲ್ಲಿ, ಬೆಂಗಳೂರಿನಲ್ಲಿ ಹಾಗೂಬೇರೆ ಬೇರೆ ರಾಜ್ಯಗಳಲ್ಲಿ ಉದ್ಯೋಗ ಮಾಡುತ್ತಾ ಇದ್ದಂತಹ ಎಂಜಿನಿಯರ್‌ಗಳು ಮತ್ತು ಇನ್ನಿತರೆ ಪದವೀಧರರು ತಮ್ಮ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿಗಳನ್ನು ಮಾಡಿದ್ದಾರೆ. ಉದಾಹರಣೆಗೆ: ಉಡುಪಿ ಜಿಲ್ಲೆ, ಬ್ರಹ್ಮಾವರದ ಕಾಡೂರು ಪಂಚಾಯಿತಿ ಮತ್ತು ಮಂಡ್ಯ ಜಿಲ್ಲೆ ಮೇಲುಕೋಟೆ ಗ್ರಾಮದಲ್ಲಿ; ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮುತ್ತಲ ಗ್ರಾಮದಲ್ಲಿ ಹಾಗೂ ಬೀದರ್ ಜಿಲ್ಲೆಯಲ್ಲಿ ಕೆರೆಗಳ ಮತ್ತು ಪುಷ್ಕರಣೆಗಳ ಹೂಳೆತ್ತಿ ಪುನಶ್ಚೇತನಗೊಳಿಸುವುದು ಮತ್ತು ಅವುಗಳ ಅಭಿವೃದ್ಧಿಪಡಿಸುವ ಮೂಲಕ ಅಂತರ್ಜಲ ಚೇತನಕ್ಕೆ ಕಾರಣೀಭೂತರಾಗಿರುವುದು ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿ. ಸಣ್ಣ ರೈತನ ಮಗ ತನ್ನ ತಂದೆಯ 5 ಎಕರೆ ಜಮೀನಿನಲ್ಲಿ ತಾನೇ ತನ್ನ ಸ್ವಂತ ಬಲದಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೊಡಗಿಕೊಂಡು, ತೋಟಗಾರಿಕೆ, ಕೃಷಿ ಉತ್ಪನ್ನ ಬೆಳೆಗಳನ್ನು ಬೆಳೆಯುವ ದಿಕ್ಕಿನಲ್ಲಿ ತನ್ನ ಕುಟುಂಬಕ್ಕೆ ನೆರವಾಗಿರುವಂತಹ ಉದಾಹರಣೆಗಳು ಸಾಕಷ್ಟು ಇವೆ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

‘ಅನೇಕ ನಗರಗಳ ವ್ಯಕ್ತಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಬಹಳ ವಿಶೇಷವಾಗಿ ನಾನು ಗಮನಿಸಿದ್ದನ್ನು ಕೂಡ ಬರೆದಿದ್ದೀರಿ. ‘ಕಂಪ್ಯೂಟರ್ ಕೀಲಿಮಣೆಯಲ್ಲಿ ಕೆಲಸ ಮಾಡಿದ್ದ ಕೈಗಳಿಗೆ ಹಾರೆ, ಗುದ್ದಲಿ, ಪಿಕಾಸಿ ಹಿಡಿಯುವುದು ಸುಲಭವಾಗಿ ಇರಲಿಲ್ಲ. ಆದರೆ, ಹುಟ್ಟು ಊರಿಗೆ ಏನಾದರೂ ಮಾಡಬೇಕೆಂಬ ಹಂಬಲ ಇವರಿಂದ ಕೆಲಸಗಳನ್ನು ಮಾಡಿದಿದೆ. ಕೆಲವು ಹಳ್ಳಿಗಳಲ್ಲಿ ಸ್ಥಳೀಯ ಸಂಘಟನೆಗಳು ಕ್ರೀಡಾ ಕ್ಲಬ್‌ಗಳ ಸದಸ್ಯರು ಇಂತಹ ಕೆಲಸಗಳನ್ನು ಮಾಡಿದ್ದಾರೆ’ ಎಂದಿದ್ದಾರೆ.

‘ಈ ಯೋಜನೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 2,400 ಕೋಟಿಗಳಷ್ಟು ಕೂಲಿಗಾಗಿ ಮತ್ತು ₹ 600 ಕೋಟಿಗಳಷ್ಟು ಸಾಮಗ್ರಿಗಳಿಗಾಗಿ ಶೇಕಡ 60ರಷ್ಟು ಗುರಿಯನ್ನು ಆ.2020ಕ್ಕೆಪೂರ್ಣಗೊಳಿಸಲಾಗಿದೆ. ಈ ದಿಕ್ಕಿನಲ್ಲಿ ಪ್ರಯತ್ನಗಳು ಮುಂದುವರಿದರೆ ನಿಮ್ಮ ಲೇಖನ ಸಾರ್ಥಕವಾಗುತ್ತದೆ ಎಂದು ಅಭಿನಂದಿಸುತ್ತಾ ತಮ್ಮ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಈ ರೀತಿಯ ಹೆಚ್ಚಿನ ಲೇಖನಗಳೊಂದಿಗೆ ನಮ್ಮ ಇಲಾಖೆಗೆ, ಹಳ್ಳಿಗಳಿಗೆ ಬಂದಿರುವ ಪದವೀಧರರಿಗೆ ಪ್ರೋತ್ಸಾಹ ತುಂಬಿಸಲು ಮತ್ತಷ್ಟು ಲೇಖನಗಳು ಹೊರಬರಲಿ’ ಎಂದು ಆಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.