
ಶಿವಮೊಗ್ಗ: ‘ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜಕೀಯ ಬದುಕಿನ ಕೊನೆಗಾಲದಲ್ಲಿದ್ದಾರೆ. ಹೀಗಾಗಿ ಭಗವದ್ಗೀತೆ ಪರ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನುವಾದಿ ಎಂದು ಹೇಳಿದ್ದಾರೆ. ಮೊದಲು ಅವರು ಮಹಾತ್ಮ ಗಾಂಧೀಜಿಯನ್ನು ಅಧ್ಯಯನ ಮಾಡಲಿ’ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಹಾತ್ಮಾ ಗಾಂಧೀಜಿ ಕೂಡ ಭಗವದ್ಗೀತೆಯನ್ನು ಹೊಗಳಿದ್ದರು. ಅದನ್ನು ತಮ್ಮ ಹೋರಾಟದ ಶಕ್ತಿ ಧಾತು ಎಂದು ಭಾವಿಸಿದ್ದರು. ಭಗವದ್ಗೀತೆ ಒಂದು ಅಮೂಲ್ಯಗ್ರಂಥ, ಸತ್ಯದ ಶೋಧ ಎಂದು ಹೇಳಿದ್ದರು. ಆದರೆ, ಸಿದ್ದರಾಮಯ್ಯ ಹೇಳಿಕೆ ಅವರ ಸೈದ್ಧಾಂತಿಕ ದಿವಾಳಿತನ ತೋರಿಸುತ್ತದೆ. ಯಾರೋ ಹೇಳಿಕೊಟ್ಟಿದ್ದನ್ನು ಹೇಳುವ ಕಮ್ಯುನಿಸ್ಟ್ ಸಿದ್ಧಾಂತವನ್ನು ತಲೆಯಲ್ಲಿ ತುಂಬಿಕೊಂಡಿರುವ ಅವರು ಭಗವದ್ಗೀತೆಯನ್ನು ಒಮ್ಮೆ ಅಧ್ಯಯನ ಮಾಡಲಿ’ ಎಂದು ಒತ್ತಾಯಿಸಿದರು.
ಭಗವದ್ಗೀತೆ ಕೇವಲ ಹಿಂದೂಗಳು ಮಾತ್ರ ಓದಬೇಕಾದ ಗ್ರಂಥವಲ್ಲ. ಎಲ್ಲಾ ಧರ್ಮದವರು ಅದನ್ನು ಓದಬೇಕು. ಭಗವದ್ಗೀತೆಯ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಕುರಾನ್, ಬೈಬಲ್ ಬಗ್ಗೆ ತಾಕತ್ತಿದ್ದರೆ ಮಾತನಾಡಲಿ. ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿಯ ಹುಚ್ಚುತನದ ಹೇಳಿಕೆಗಳ ಕೊಡುವುದು ಬಿಟ್ಟು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಭಗವದ್ಗೀತೆಯನ್ನು ಶಾಲಾ ಪಠ್ಯ–ಪುಸ್ತಕದಲ್ಲಿ ಅಳವಡಿಸುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಎಚ್.ಡಿ. ಕುಮಾರಸ್ವಾಮಿ ಪತ್ರ ಬರೆದಿರುವುದು ಅದಕ್ಕೆ ಧರ್ಮೇಂದ್ರ ಪ್ರಧಾನ್ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸ್ವಾಗತಾರ್ಹ ವಿಷಯ ಎಂದರು.
ಕೆಲವು ಮುಸ್ಲಿಮ್ ಮುಖಂಡರು ಬಾಬ್ರಿ ಮಸೀದಿಯನ್ನು ಪುನಃ ನಿರ್ಮಿಸಲು ಮುಂದಾಗಿದ್ದಾರೆ. ಮಸೀದಿಗೆ ಬಾಬರ್ ಹೆಸರನ್ನೇ ಏಕೆ ಇಡಬೇಕು. ಆ ಸಮುದಾಯದಲ್ಲಿರುವ ಉತ್ತಮ ನಾಯಕರ ಹೆಸರು ಇಡಬಹುದಲ್ಲವೇ? ಮಸೀದಿಗೆ ಬಾಬರ್ ಹೆಸರು ಇಟ್ಟರೆ ಅದನ್ನು ಧ್ವಂಸಗೊಳಿಸುವುದು ಖಚಿತ ಎಂದರು.
ಮೋಹನ್ ಜಾಧವ್, ರಾಜು, ಕುಬೇರಪ್ಪ, ಬಾಲು, ದಿನೇಶ್, ಶಂಕ್ರಾನಾಯ್ಕ, ಶಿವಕುಮಾರ್, ಗೋವಿಂದ ಇದ್ದರು.
ಕೋಮು ದ್ವೇಷ ಭಾಷಣ ವಿರೋಧಿ ಕಾಯ್ದೆ ಸರ್ಕಾರ ಜಾರಿಗೆ ತಂದಿದೆ. ಮತ ಬ್ಯಾಂಕ್ ಓಲೈಕೆಗೆ ಮುಸ್ಲಿಮರ ಪರ ಮಾತಾಡುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕಾಯ್ದೆಯಡಿ ಮೊದಲು ಶಿಕ್ಷೆ ಅನುಭವಿಸಲಿದ್ದಾರೆ.ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.