ADVERTISEMENT

111 ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ: ಸಮೀಕ್ಷೆ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 11:00 IST
Last Updated 5 ಜನವರಿ 2021, 11:00 IST
ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಮಂಗಳವಾರ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿದ್ದ ಕೊಳೆಗೇರಿ ನಿವಾಸಿಗಳ ಸಮೀಕ್ಷಾ ಕಾರ್ಯಾಗಾರವನ್ನು ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಮಂಗಳವಾರ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿದ್ದ ಕೊಳೆಗೇರಿ ನಿವಾಸಿಗಳ ಸಮೀಕ್ಷಾ ಕಾರ್ಯಾಗಾರವನ್ನು ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.   

ಶಿವಮೊಗ್ಗ: ಜಿಲ್ಲೆಯ111 ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಶೀಘ್ರ ಹಕ್ಕುಪತ್ರ ವಿತರಿಸಲಾಗುವುದು. ಮನೆಕಟ್ಟಿಕೊಳ್ಳಲು ಬ್ಯಾಂಕ್ ಸಾಲ ದೊರಕಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಮಂಗಳವಾರ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿದ್ದ ಕೊಳೆಗೇರಿ ನಿವಾಸಿಗಳ ಸಮೀಕ್ಷಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ಎಲ್ಲ ಕೊಳೆಗೇರಿಗಳ ನಿವಾಸಿಗಳಿಗೂ ಹಕ್ಕುಪತ್ರ ನೀಡಲಾಗುತ್ತಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಹಕ್ಕುಪತ್ರ ಪಡೆಯಲು ಬೇಕಾದ ದಾಖಲೆಗಳು. ಚಕ್ಕುಬಂಧಿ. ಅರ್ಜಿಗಳ ಕುರಿತು ಮಾಹಿತಿ ಬೇಕಾಗುತ್ತದೆ. ಕೊಳಚೆ ನಿರ್ಮೂಲನಾ ಮಂಡಳಿ, ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ ಕಚೇರಿ, ಸರ್ಕಾರೇತರ ಸಂಸ್ಥೆಗಳ ಸಹಕಾರ ಪಡೆದು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಾಹಿತಿ ಸಂಗ್ರಹಿಸುವ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ADVERTISEMENT

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 65, ಜಿಲ್ಲೆಯ ಇತರೆ ಭಾಗಗಳಲ್ಲಿ 46 ಕೊಳೆಗೇರಿಗಳು ಸೇರಿ 111 ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲಿ ನೆಲೆಸಿರುವ ಎಲ್ಲರಿಗೂ ಹಕ್ಕುಪತ್ರ ನೀಡಲಾಗುವುದು. ಹಕ್ಕುಪತ್ರ ನೀಡಿದ ನಂತರ ಅವರು, ಸ್ವಂತ ಮನೆಗಳನ್ನು ಕಟ್ಟಿಕೊಳ್ಳಬಹುದು. ಗೃಹ ಸಾಲ ದೊರಕಿಸಲು ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಇದೊಂದು ಮಹತ್ವಪೂರ್ಣ ಕೆಲಸ. ಹಕ್ಕುಪತ್ರ ನೀಡುವಾಗ ಬಹಳ ಎಚ್ಚರಿಕೆಯಿಂದ ದಾಖಲೆಗಳನ್ನು ತುಂಬಬೇಕಾಗುತ್ತದೆ. ಬಹುತೇಕ ಕೊಳೆಗೇರಿಗಳು ಇಕ್ಕಟ್ಟಾಗಿವೆ. ಕಿಷ್ಕಿಂಧೆಯಂತಹ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಹಲವು ಮನೆಗಳಿಗೆ ಹೋಗಲು ದಾರಿ ಇಲ್ಲ. ಸರ್ವೇ ಮಾಡುವಾಗ, ಅಳತೆ ಮಾಡುವಾಗ ಎಚ್ಚರಿಕೆ ಅಗತ್ಯ. ತಾರತಮ್ಯ ಮಾಡದೇ ವಾಸ್ತವ ಸ್ಥಿತಿಗತಿ ಪರಿಶೀಲಿಸಬೇಕು. ಸಮಸ್ಯೆಗಳು ಎದುರಾದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗದ ನಂತರ ಭದ್ರಾವತಿ, ಸಾಗರ, ಕಾರ್ಗಲ್, ಸೊರಬ, ಶಿರಾಳಕೊಪ್ಪ, ಹೊಸನಗರ, ಶಿಕಾರಿಪುರಗಳಲ್ಲೂ ತರಬೇತಿ ನೀಡಲಾಗುವುದು. ಶೀಘ್ರ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆ ಮೇಯರ್ ಸುವರ್ಣಾ ಶಂಕರ್, ಆಯಕ್ತ ಚಿದಾನಂದ ವಟಾರೆ, ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್,ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಮಂಜುನಾಥ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.