ADVERTISEMENT

ಇಂದೇ ಚುನಾವಣೆ ನಡೆದರೂ ಗೆಲ್ಲುವ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:37 IST
Last Updated 25 ಏಪ್ರಿಲ್ 2024, 15:37 IST
ಶಿವಮೊಗ್ಗದಲ್ಲಿ ಬುಧವಾರ ವಿಪ್ರ  ಮಹಿಳೆಯರೊಂದಿಗೆ ಕೆ.ಎಸ್.ಈಶ್ವರಪ್ಪ ಸಭೆ ನಡೆಸಿದರು
ಶಿವಮೊಗ್ಗದಲ್ಲಿ ಬುಧವಾರ ವಿಪ್ರ  ಮಹಿಳೆಯರೊಂದಿಗೆ ಕೆ.ಎಸ್.ಈಶ್ವರಪ್ಪ ಸಭೆ ನಡೆಸಿದರು   

ಶಿವಮೊಗ್ಗ: ‘ಕ್ಷೇತ್ರದಲ್ಲಿ ನಾನು ಯಾವುದೇ ಊರಿಗೆ ಹೋದರೂ ಜನರು ನಿರೀಕ್ಷೆ ಮೀರಿ ಬೆಂಬಲ ಕೊಡುತ್ತಿದ್ದಾರೆ. ಇವತ್ತೇ ಚುನಾವಣೆ ನಡೆದರೂ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದು ಖಚಿತ‘ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ವಿಪ್ರ ಮಹಿಳೆಯರಿಂದ ಬುಧವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಲಿಂಗಾಯಿತರು, ವೀರಶೈವರು ಸೇರಿದಂತೆ ಎಲ್ಲ ಸಮುದಾಯದವರು ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಶೇ 60ರಷ್ಟು ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ನನಗೆ ಬೆಂಬಲ ನೀಡುತ್ತಿದ್ದಾರೆ. ನಾನು ಯಾವ ವಿಚಾರ ಇಟ್ಟುಕೊಂಡು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೋ ಅದಕ್ಕೆ ಎಲ್ಲರ ಬೆಂಬಲ ಸಿಗುತ್ತಿದೆ’ ಎಂದರು.

‘ನಾನು ಸ್ಪರ್ಧೆ ಮಾಡುತ್ತೇನೆ ಎಂದಾಗ ಈಶ್ವರಪ್ಪ ಸ್ಪರ್ಧೆ ಮಾಡಲ್ಲ, ನಾಮಪತ್ರ ಸಲ್ಲಿಸಲ್ಲ ಎಂದು ಅಪ್ಪ-ಮಕ್ಕಳು ಅಪಪ್ರಚಾರ ಮಾಡಿಕೊಂಡು ಬಂದರು. ಆದರೆ, ಹಲವರು ನನ್ನ ಸಿದ್ಧಾಂತ ಮೆಚ್ಚಿದರು. 35 ವರ್ಷ ಪಕ್ಷಕ್ಕಾಗಿ ದುಡಿದ ವ್ಯಕ್ತಿ ಈಗ ಬಿಜೆಪಿ ಬಿಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದರೆ ಪಕ್ಷದಲ್ಲಿ ಎಷ್ಟು ಸಮಸ್ಯೆಗಳಿಗೆ ಎಂಬುದನ್ನು ಅರ್ಥ ಮಾಡಿಕೊಳ್ಳಿ’ ಎಂದರು.

ADVERTISEMENT

ತೀರ್ಥಹಳ್ಳಿಯಲ್ಲಿರುವ ಭೀಮನಕಟ್ಟೆ ಮಠಕ್ಕೆ ನನ್ನ ಬೆಂಬಲಗರು ಹೋಗಿದ್ದಾಗ ಸ್ವಾಮೀಜಿ, ‘ಈಶ್ವರಪ್ಪ ಮೋದಿ ವಿರುದ್ಧ ನಿಲ್ಲುತ್ತಾರಾ? ಬಿಜೆಪಿ ಬಿಡುತ್ತಾರಾ’ ಎಂದು ಕೇಳಿದ್ದಾರೆ. ‘ಬಿಜೆಪಿ ಬಿಡಲ್ಲ. ಚುನಾವಣೆ ಮುಗಿದ ಮೇಲೆ ಈಶ್ವರಪ್ಪ ಮತ್ತೆ ಬಿಜೆಪಿಗೆ ಬರುತ್ತಾರೆ. ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತಾರೆ ಎಂದು ವಿವರಿಸಿದಾಗ ಸ್ವಾಮೀಜಿ ನನಗೆ ಆಶೀರ್ವಾದ ಮಾಡಿ ನನ್ನ ನಾಮಪತ್ರ ಸಲ್ಲಿಕೆಗೆ ₹1,000 ದೇಣಿಗೆ ಕೊಟ್ಟು ಕಳಿಸಿದ್ದಾರೆ’ ಎಂದರು.

ನಾಮಪತ್ರ ಸಲ್ಲಿಕೆ ಬಳಿಕ ಶ್ರೀಧರಾಶ್ರಮಕ್ಕೆ ಹೋಗಿ ಅಲ್ಲಿ ಸ್ವಾಮೀಜಿ ಆಶೀರ್ವಾದ ಪಡೆಯುವ ಸಂದರ್ಭ ಅಲ್ಲಿನ ಗುರುಗಳು ‘ನೀನು ಹಿಂದು ಪರ ಕೆಲಸ ಮಾಡುತ್ತಿದ್ದೀಯಾ ನಿನಗೆ ಒಳ್ಳೆದಾಗುತ್ತದೆ ಎದು ಆಶೀರ್ವಾದ ಮಾಡಿದ್ದಾರೆ’ ಎಂದು ತಿಳಿಸಿದರು.

‘ಚುನಾವಣೆ ಬಳಿಕ ಬಿಜೆಪಿಯಲ್ಲಿ ಶುದ್ಧೀಕರಣ ಆಗಲಿದೆ. ಹಿಂದುತ್ವ ಪರವಾಗಿರುವವರು ನನಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಕಬ್ಬಿನ ಜಲ್ಲೆ ಜೊತೆ ನಿಂತಿರುವ ರೈತ ಚಿಹ್ನೆ ನನ್ನದು. ರೈತನ ಚಿಹ್ನೆ ಸಿಕ್ಕಿರುವುದು ತುಂಬಾನೇ ಸಂತೋಷ’ ಎಂದರು.

ಕಾರ್ಯಕ್ರಮದಲ್ಲಿ ರಮೇಶ್ ಹೊಯ್ಸಳ, ವಿಪ್ರ ಸಹಕಾರ ಸಂಘದ ಸದಸ್ಯೆ ಉಮಾ ಮೂರ್ತಿ, ವಿಜಯಲಕ್ಷ್ಮಿ ಹೊಯ್ಸಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.