
ಶಿವಮೊಗ್ಗ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಫೆ. 24ರಿಂದ ಮಾರ್ಚ್ 4ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಫೆ. 24ರಂದು ಬೆಳಿಗ್ಗೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ನಂದಿ ಪೂಜೆ ಹಾಗೂ ಧರ್ಮ ಧ್ವಜಾರೋಹಣ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು.
ಫೆ.25ರ ಬೆಳಿಗ್ಗೆ 10 ಗಂಟೆಗೆ ದೇಶಿ ಕ್ರೀಡೆಗಳಾದ ಲಗೋರಿ, ರಂಗೋಲಿ ಸ್ಪರ್ಧೆ ಹಾಗೂ ಮ್ಯಾರಥಾನ್ ಉದ್ಘಾಟನೆ, ಸಂಜೆ 6 ಗಂಟೆಗೆ ಸರ್ವಾಲಂಕೃತ ಚಂದ್ರಮೌಳೇಶ್ವರ ಸ್ವಾಮಿ ಉತ್ಸವ, 26 ರಂದು ಬೆಳಿಗ್ಗೆ 10 ಗಂಟೆಗೆ ಕೃಷಿ ಉಪನ್ಯಾಸ ಮಾಲಿಕೆ, ಸಂಜೆ 6 ಗಂಟೆಗೆ ಮಲ್ಲೇಶ್ವರ ಸ್ವಾಮಿ ಉತ್ಸವ ನಡೆಯಲಿದೆ.
ಫೆ.27ರಂದು ಬೆಳಿಗ್ಗೆ 9.30ಕ್ಕೆ ಸಾಮೂಹಿಕ ವಿವಾಹ ಹಾಗೂ ಹಿರಿಯ ದಂಪತಿಗೆ ಸನ್ಮಾನ ಸಮಾರಂಭ, ರಾತ್ರಿ 8 ಗಂಟೆಗೆ ಸಿದ್ದೇಶ್ವರ ಸ್ವಾಮಿ ಉತ್ಸವ ನಡೆಯಲಿದೆ. ಫೆ.28ರಂದು ಸಂಜೆ 6 ಗಂಟೆಗೆ ಕಾಲಭೈರವೇಶ್ವರ ಸ್ವಾಮಿಗೆ ಹೂವಿನ ಪಾಲಕಿ ಉತ್ಸವ ಹಾಗೂ ಮುತ್ತಿನ ಪಾಲಕಿ ಉತ್ಸವ ನಡೆಯುವುದು.
ಮಾರ್ಚ್ 1ರಂದು ಬೆಳಿಗ್ಗೆ 6.30ಕ್ಕೆ ಕಾಲಭೈರವೇಶ್ವರ ಸ್ವಾಮಿಗೆ ಸುವರ್ಣ ಕವಚ ಅಲಂಕಾರ ಹಾಗೂ ಗಂಗಾಧರೇಶ್ವರ ಐಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ, ಸಂಜೆ 7 ಗಂಟೆಗೆ ಕಾಲಭೈರವೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜ್ವಾಲಾಪೀಠಾರೋಹಣ ಮತ್ತು ಸಿದ್ಧ ಸಿಂಹಾಸನ ಪೂಜೆ ನಡೆಯುತ್ತದೆ. ರಾತ್ರಿ 8 ಗಂಟೆಗೆ ಚಂದ್ರಮಂಡಲೋತ್ಸವ ಪೂಜೆ ನಡೆಯಲಿದೆ.
ಮಾರ್ಚ್ 2ರಂದು ಸಂಜೆ 6.30ಕ್ಕೆ ಸರ್ವಧರ್ಮ ಸಮ್ಮೇಳನ, ರಾತ್ರಿ 8 ಕ್ಕೆ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ, ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಂತರ ನಾಟಕ ಪ್ರದರ್ಶನ ನಡೆಯಲಿದೆ.
3ರಂದು ಮುಂಜಾನೆ ಗಂಗಾಧರೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ನಿರ್ಮಲಾನಂದನಾಥ ಸ್ವಾಮಿ ಅವರ ಅಡ್ಡಪಾಲಕಿ ಉತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಗಿರಿ ಪ್ರದಕ್ಷಿಣೆ ನಡೆಯಲಿದೆ. ಬಳಿಕ ಸೋಮೇಶ್ವರ ಸ್ವಾಮಿಯ ಉತ್ಸವ ನಡೆಯಲಿದೆ.
ಮಾರ್ಚ್ 4ರ ಬೆಳಿಗ್ಗೆ 9 ಗಂಟೆಗೆ ಕ್ಷೇತ್ರದ ಬಿಂದು ಸರೋವರದಲ್ಲಿ ಅವಭೃತ ಸ್ನಾನ ಮಹಾಭಿಷೇಕ ಮತ್ತು ಸಭಾ ಕಾರ್ಯಕ್ರಮದ ಬಳಿಕ ಧರ್ಮ ಧ್ವಜಾರೋಹಣದೊಂದಿಗೆ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.