ಇ.ಡಿ
ಶಿವಮೊಗ್ಗ: 11 ವರ್ಷಗಳ ಹಿಂದೆ ಇಲ್ಲಿನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ (ಡಿಸಿಸಿ) ನಕಲಿ ಚಿನ್ನಾಭರಣ ಅಡವಿಟ್ಟು ₹62.77 ಕೋಟಿ ಸಾಲ ಪಡೆದಿದ್ದ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮಂಗಳವಾರ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
2014ರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟ ಪ್ರಕರಣ ಬೆಳಕಿಗೆ ಬಂದಾಗ ಡಿಸಿಸಿ ಬ್ಯಾಂಕಿನ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅಧ್ಯಕ್ಷರಾಗಿದ್ದರು. ಆಗ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನು ಪಡೆದಿದ್ದರು.
ಶಿವಮೊಗ್ಗ ನಗರ ಹಾಗೂ ಕುಂಸಿಯಲ್ಲಿ ದಾಳಿ ನಡೆದಿದೆ.
ಬ್ಯಾಂಕಿನ ಆಗಿನ ವ್ಯವಸ್ಥಾಪಕಿ ಶೋಭಾ, ಆಗ ಕೆಲಸ ಮಾಡುತ್ತಿದ್ದ ಬ್ಯಾಂಕ್ ಸಿಬ್ಬಂದಿ, ಕಾರು ಚಾಲಕರು ಹಾಗೂ ಆರ್.ಎಂ.ಮಂಜುನಾಥಗೌಡ ಅವರ ಸಂಬಂಧಿಗಳಿಗೆ ಸೇರಿದ ಮನೆಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.