ಸೊರಬ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಹಾಗೂ ಬೀಸುತ್ತಿರುವ ಗಾಳಿಗೆ ರಸ್ತೆ ಬದಿಯ ಮರಗಳು, ಕೊಂಬೆಗಳು ಧರೆಗುರುಳುತ್ತಿದ್ದು, ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.
ತಾಲ್ಲೂಕಿನಲ್ಲಿ ಪ್ರತಿ ಬಾರಿ ರಭಸವಾದ ಮಳೆ, ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಸಾಕಷ್ಟು ಅನಾಹುತ ಸೃಷ್ಟಿಸುತ್ತಿವೆ. ವಾಹನಗಳ ಮೇಲೆ ಬಿದ್ದು ಅಪಾರ ನಷ್ಟ ಉಂಟು ಮಾಡುತ್ತಿವೆ. ಸಂಚರಿಸುವ ವಾಹನಗಳ ಮೇಲೆ ಬಿದ್ದ ನಿದರ್ಶನಗಳಿವೆ. ಅಪಾಯ ಉಂಟು ಮಾಡಬಹುದಾದ ಮರಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯ.
ತಾಲ್ಲೂಕಿನ ಉಳವಿ ಸಮೀಪದ ಕರ್ಜಿಕೊಪ್ಪ ಬಳಿ ಈಚೆಗೆ ಕ್ಯಾಂಟರ್ ಮೇಲೆ ಮರ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸಾಗರ- ಸೊರಬ ಮಾರ್ಗದ ಅವಲಗೋಡು ಭಾಗದಲ್ಲಿ ಬೃಹತ್ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಬೊಮ್ಮನಳ್ಳಿ ರಸ್ತೆ ಬದಿ ಹಾಗೂ ಸೊರಬ-ಸಿದ್ದಾಪುರ ರಸ್ತೆಯ ಪಕ್ಕದಲ್ಲಿದ್ದ ಮರಗಳು ನೆಲಕ್ಕುರುಳಿದ್ದವು. ಹೊಳೆಕೊಪ್ಪ ಭಾಗದಲ್ಲಿ ರಸ್ತೆ ಅಂಚಿನ ಅಕೇಶಿಯಾ ಮರಗಳು ಬುಡಮೇಲಾಗುತ್ತಿವೆ. ಹಲವೆಡೆ ವಿದ್ಯುತ್ ತಂತಿಗಳು ಹರಿದು, ಕಂಬಗಳು ಧರೆಗುರುಳಿ ಅನಾಹುತ ಸೃಷ್ಟಿಸುತ್ತಿವೆ.
‘ಮುಂಗಾರು ಪ್ರಾರಂಭದಲ್ಲಿ ಸುರಿದ ಮಳೆಗೆ ಒಂದೇ ದಿನ ತಾಲ್ಲೂಕಿನ ಕುಮ್ಮೂರು, ಚಿಕ್ಕಾವಲಿ, ಎಡಗೊಪ್ಪ, ಹಿರಿಯಾವಲಿ, ಉದ್ರಿ, ಬಿಳಾಗಿ ಭಾಗದಲ್ಲಿ 50ಕ್ಕೂ ಹೆಚ್ಚು ಮರಗಳ ಕೊಂಬೆಗಳು ಮುರಿದು ಬಿದ್ದಿದ್ದವು. ಮಳೆ ಸಂದರ್ಭದಲ್ಲಿ ಸಾರ್ವಜನಿಕರು, ವಾಹನ ಸವಾರರು ಜೀವಭಯದಲ್ಲೇ ಸಾಗುವಂತಾಗಿದೆ’ ಎಂದು ನಿತ್ಯ ದ್ವಿಚಕ್ರವಾಹನದಲ್ಲಿ ಸಂಚರಿಸುವ ರಾಮಪ್ಪ ಜಡ್ಡಳ್ಳಿ ಹೇಳುತ್ತಾರೆ.
‘ಮುಂಗಾರು ಹಂಗಾಮಿನ ಮಳೆ ಇನ್ನೂ ಸುರಿಯಲಿದೆ. ಕೂಡಲೇ ಎಚ್ಚೆತ್ತು, ರಸ್ತೆಬದಿ ಒಣಗಿರುವ, ರಸ್ತೆಗೆ ಚಾಚಿಕೊಂಡಿರುವ, ವಿದ್ಯುತ್ ತಂತಿಗೆ ಚಾಚಿಕೊಂಡಿರುವ ಮರ ಹಾಗೂ ಕೊಂಬೆಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಬೇಕು. ಸೊರಬ-ಆನವಟ್ಟಿ ಮಾರ್ಗದ ರಸ್ತೆಯಲ್ಲಿ ಮರದ ಕೊಂಬೆಗಳು ರಸ್ತೆಗೆ ಚಾಚಿಕೊಂಡಿವೆ. ವಿದ್ಯುತ್ ತಂತಿಗೂ ಅವು ತಗುಲಿವೆ. ಅನಾಹುತ ಸಂಭವಿಸುವ ಮುನ್ನ ಕತ್ತರಿಸಬೇಕಿದೆ’ ಎಂದು ಕುಪ್ಪಗಡ್ಡೆ ಗ್ರಾಮದ ನಿವಾಸಿ ನಿರಂಜನ್ ಕೋರುತ್ತಾರೆ.
ಶಾಲೆ ಅಂಗನವಾಡಿ ಬಳಿಯೂ ಅಪಾಯವಿದೆ
ಕೇವಲ ರಸ್ತೆಯಷ್ಟೇ ಅಲ್ಲದೆ ತಾಲ್ಲೂಕಿನ ಹಲವು ಅಂಗನವಾಡಿಗಳು ಹಾಗೂ ಶಾಲೆಗಳ ಕಟ್ಟಡಗಳ ಬಳಿ ಬೀಳುವ ಸ್ಥಿತಿಯಲ್ಲಿರುವ ಮರಗಳಿವೆ. ಅಂತಹ ಮರಗಳ ಟೊಂಗೆಗಳ ತೆರವಿಗೆ ಅರಣ್ಯ ಇಲಾಖೆಗೆ ಅರ್ಜಿ ನೀಡಲಾಗಿದೆ. ಆದರೆ ಮರಗಳ ತೆರವಿಗೆ ಮೇಲಧಿಕಾರಿಗಳ ಸೂಚನೆ ಪಡೆಯಬೇಕಿದೆ ಎಂದು ಇಲಾಖೆ ಸಿಬ್ಬಂದಿ ಹೇಳುತ್ತಾರೆ. ಮಳೆ ಗಾಳಿ ಹೆಚ್ಚಾದರೆ ಅವಘಡ ಸಂಭವಿಸುವ ಸಾಧ್ಯತೆ ಇದ್ದು ಕೂಡಲೇ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
‘ಮೇಲಧಿಕಾರಿಗಳ ಅನುಮತಿ ಬೇಕು’
‘ಮರ ರೆಂಬೆ–ಕೊಂಬೆ ತೆರವಿಗೆ ನಮ್ಮಲ್ಲಿ ನಿರ್ವಹಣಾ ತಂಡ ಇದೆ. ಸಾರ್ವಜನಿಕರಿಂದ ದೂರು ಬಂದಾಗ ನಮ್ಮ ತಂಡ ಶೀಘ್ರವೇ ಆ ಸ್ಥಳಕ್ಕೆ ತೆರಳಿ ತೆರವು ಮಾಡುತ್ತದೆ. ಆದರೆ ಮರಗಳ ತೆರವಿಗೆ ಮೇಲಧಿಕಾರಿಗಳ ಅನುಮತಿ ಬೇಕು. ಈಗಾಗಲೇ ಅಪಾಯಕಾರಿ ಮರಗಳ ತೆರವಿಗೆ ಅರ್ಜಿಗಳು ಬಂದಿದ್ದು ಅಂತಹ ಮರಗಳ ತೆರವು ಕಾರ್ಯ ನಡೆಯುತ್ತಿದೆ’ ಎಂದು ವಲಯ ಅರಣ್ಯಾಧಿಕಾರಿ ಜಾವಿದ್ ಭಾಷಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.