ADVERTISEMENT

ಶಿವಮೊಗ್ಗ | ಸಂಘಟನೆ ಕೊರತೆಯೇ ರೈತರ ಸಂಕಷ್ಟಕ್ಕೆ ಮೂಲ: ಪಂಡಿತಾರಾಧ್ಯ ಶ್ರೀ

ಜಾತಿ ನೋಡದೇ ಸಮಾಜ ಮುಖಿ ಕೆಲಸ ಮಾಡುವವರ ಬೆಂಬಲಿಸಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 4:17 IST
Last Updated 20 ಆಗಸ್ಟ್ 2025, 4:17 IST
ಶಿವಮೊಗ್ಗದಲ್ಲಿ ಮಂಗಳವಾರ ನಡೆದ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ರುದ್ರಪ್ಪ ಅವರ ಸಂಸ್ಮರಣೆ ಕಾರ್ಯಕ್ರಮದ ಉದ್ಘಾಟನೆಯ ನೋಟ
ಶಿವಮೊಗ್ಗದಲ್ಲಿ ಮಂಗಳವಾರ ನಡೆದ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ರುದ್ರಪ್ಪ ಅವರ ಸಂಸ್ಮರಣೆ ಕಾರ್ಯಕ್ರಮದ ಉದ್ಘಾಟನೆಯ ನೋಟ   

ಶಿವಮೊಗ್ಗ: ‘ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ನಾಡಿಗೆ ಅನ್ನ ಕೊಡುವ ರೈತರ ಯಾವ ಬೇಡಿಕೆಗಳು ಎಷ್ಟರ ಮಟ್ಟಿಗೆ ಈಡೇರಿವೆ. ಇದಕ್ಕೆಲ್ಲ ರೈತಾಪಿ ವರ್ಗದಲ್ಲಿನ ಸಂಘಟನೆ ಕೊರತೆಯೇ ಕಾರಣ’ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ರಾಜ್ಯ ರೈತಸಂಘದ ಸಂಸ್ಥಾಪಕ ಎಚ್.ಎಸ್. ರುದ್ರಪ್ಪ ಅವರ ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ರೈತಾಪಿ ವರ್ಗದ ಬಗ್ಗೆ ಕಾಳಜಿ ತೋರುವ ಅಂತಃಕರಣವಿಲ್ಲದ ರಾಜಕೀಯ ನಾಯಕತ್ವವೇ ಕೃಷಿ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಕಾರಣ. ಜಾತಿ, ಮತ ಬಿಟ್ಟು ರೈತರು ಸಂಘಟನೆಗೊಂಡರೆ ಮಾತ್ರ ಇದಕ್ಕೆ ‍ಪರಿಹಾರ ಸಿಗಲಿದೆ’ ಎಂದರು.

‘ಭ್ರಷ್ಟ, ದುಷ್ಟ ಆಗಿದ್ದರೂ ನಮ್ಮ ಜಾತಿಯವರು, ಇಂತಹದ್ದೇ ಪಕ್ಷದವರು, ಇವರಿಗೇ ಮತ ಹಾಕಬೇಕು ಎಂದು ಮತ ಕೊಟ್ಟು ಆಯ್ಕೆ ಮಾಡುತ್ತೇವೆ. ಈ ವಿಚಾರದಲ್ಲಿ ನಾವು (ಮತದಾರರು) ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿದ್ದೇವೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಪ್ರಾಮಾಣಿಕತೆ, ಜನಪರ ಕಾಳಜಿ, ಸರಳವಾಗಿ ಬದುಕುವ ಮೌಲ್ಯಗಳು ಮೂಲೆಗುಂಪು ಆಗಿ, ಇಂದು ದಿಢೀರ್‌ ಶ್ರೀಮಂತನಾಗಬೇಕು. ಅಧಿಕಾರ ಪಡೆದು ದಬ್ಬಾಳಿಕೆ ಮಾಡಬೇಕು ಎಂಬ ವಾತಾವರಣ ಸೃಷ್ಟಿಯಾಗುತ್ತಿದೆ. ಮನೆ–ಮಠಕ್ಕಿಂತ ದೊಡ್ಡದು ಈ ಸಮಾಜ. ಇದರ ಚುಕ್ಕಾಣಿ ಹಿಡಿಯುವಂತಹ ನಾಯಕ ದುಷ್ಟನಾಗಿದ್ದರೆ ಗತಿ ಏನು. ಇವತ್ತಿನ ಸ್ಥಿತಿ ಹಾಗೆಯೇ ಇದೆ. ನೀಚರನ್ನು ಆ ಸ್ಥಾನದಲ್ಲಿ ಕೂರಿಸಿದ್ದೇವೆ. ತಪ್ಪು ಅವರದ್ದಲ್ಲ ನಮ್ಮದು. ನಾವು ಬದಲಾದರೆ ಈ ದೇಶ ಬದಲಾವಣೆ ಆಗುತ್ತದೆ’ ಎಂದರು.

ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಸರ್ಕಾರ ಬಂದರೂ ರೈತರಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ನೀಡುತ್ತಿಲ್ಲ. ಅದರ ವಿರುದ್ಧ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ರೈತರ ಹೋರಾಟಕ್ಕೆ ಸಿದ್ಧತೆ ನಡೆದಿದೆ. ಎಲ್ಲರೂ ಅದಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

‘ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಭೂ–ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಯಾರು ಬೇಕಾದರೂ ಭೂಮಿ ಕೊಳ್ಳಬಹುದು ಎಂಬ ನಿಯಮ ರೂಪಿಸಿದ್ದರು. ಆ ಕಾಯ್ದೆಯ ಫಲವಾಗಿ ರೈತರು ಇಂದು ಭೂರಹಿತರಾಗಿ ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಆ ಕಾಯ್ದೆ ವಾಪಸ್‌ ಪಡೆಯುತ್ತೇವೆ ಎಂದು ಸಿದ್ದರಾಮಯ್ಯ ಮಾತು ಕೊಟ್ಟಿದ್ದರು. ಈಗ ಎರಡೂವರೆ ವರ್ಷವಾಗಿದೆ. ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಅವರ ಜಾಣ ಮೌನದ ವಿರುದ್ಧ ಚಳವಳಿ ರೂಪಿಸಲಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಗೌರವಾಧ್ಯಕ್ಷ ಎನ್.ಕೆ. ಮಂಜುನಾಥಗೌಡ, ಪ್ರಮುಖರಾದ ಭಕ್ತರಹಳ್ಳಿ ಬೈರೇಗೌಡ, ಹನುಮಂತಪ್ಪ, ಎನ್. ಉಮೇಶ್ ಪಾಟೀಲ್, ಮಲ್ಲನಗೌಡ ಪಾಟೀಲ್, ವೀರಣ್ಣ, ಅರುಣ್ ಕುಮಾರ್, ಶಿವಪ್ಪ, ವೈ.ಎಚ್. ನಾಗರಾಜ್, ಶಿವಣ್ಣ, ಮಂಜುನಾಥ್, ರವಿ, ಸುರೇಶ್ ನಾಯ್ಕ್ ಇದ್ದರು.

ಹಸಿರು ಶಾಲು ಧರಿಸಿ ರೈತರ ಸಂಘಟಿಸುವವರ ಜವಾಬ್ದಾರಿ ಏನು ಎಂಬುದನ್ನು ಎಚ್.ಎಸ್.ರುದ್ರಪ್ಪ ಅವರಂತಹ ನಾಯಕರು ನಮಗೆ ಹೇಳಿಕೊಟ್ಟಿದ್ದಾರೆ. ಅಂತಹ ಮಹನೀಯರ ವಿಚಾರಧಾರೆಯ ಅನುಕರಣೆ ಇಂದಿನ ತುರ್ತು
ಕೋಡಿಹಳ್ಳಿ ಚಂದ್ರಶೇಖರ ರಾಜ್ಯ ರೈತಸಂಘ ಹಸಿರುಸೇನೆ ಅಧ್ಯಕ್ಷ
ಸಮಾಜಮುಖಿ ಕೆಲಸ ಮಾಡುವವರಿಗೆ ಯಾವುದೇ ಜಾತಿ–ಧರ್ಮದವರಾಗಿರಲಿ ಚುನಾವಣೆ ಸಂದರ್ಭದಲ್ಲಿ ಅವರಿಗೆ ಮತ ಕೊಡಬೇಕು. ರೈತರದ್ದೇ ಸರ್ಕಾರ ಆದರೆ ಕೃಷಿ ಕ್ಷೇತ್ರದ ಇನ್ನಷ್ಟು ಉನ್ನತಿ ಸಾಧ್ಯ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.