ADVERTISEMENT

ಆನವಟ್ಟಿ: ನಿರಂತರ ಆದಾಯ ತರುವ ಬೆಳೆಗಳಿಗೆ ಆದ್ಯತೆ

ಮಾದರಿಯಾದ ಲಕ್ಕವಳ್ಳಿ ಗ್ರಾಮದ ರೈತ ನಾಗರಾಜ ಅವರ ಪ್ರಗತಿಪರ ನಡೆ

ರವಿ ಆರ್.ತಿಮ್ಮಾಪುರ
Published 25 ಆಗಸ್ಟ್ 2021, 9:56 IST
Last Updated 25 ಆಗಸ್ಟ್ 2021, 9:56 IST
ನಾಗರಾಜ ಅವರ ಮಿಶ್ರಬೆಳೆ ತೋಟ
ನಾಗರಾಜ ಅವರ ಮಿಶ್ರಬೆಳೆ ತೋಟ   

ಆನವಟ್ಟಿ: ಲಕ್ಕವಳ್ಳಿ ಗ್ರಾಮದ ಪ್ರಗತಿಪರ ರೈತ ನಾಗರಾಜ ಹಸ್ವೆರ್ ಅವರು ಮಿಶ್ರ ವ್ಯವಸಾಯದ ಜೊತೆಗೆ ನಿರಂತರ ಆದಾಯ ತರುವ ಬೆಳೆಗಳಿಗೆ ಅದ್ಯತೆ ನೀಡುವ ಮೂಲಕ ಮಾದರಿ ರೈತ ಎನ್ನಿಸಿದ್ದಾರೆ.

ಎರಡು ಇಂಚು ನೀರು ಇರುವ ಕೊಳವೆಬಾವಿ ಜೊತೆಗೆ ವರದಾ ನದಿಯಿಂದ ಪಂಪ್‍ಸೆಟ್ ಮೂಲಕ ನೀರು ಹಾಯಿಸಿಕೊಂಡು ಹನಿ ನೀರಾವರಿ ಪದ್ಧತಿಯಲ್ಲಿ 15 ಎಕರೆ ಜಮೀನಿನ ಬೆಳೆಗಳಿಗೆ ನೀರುಣಿಸಿ ಭರಪೂರ ಬೆಳೆ ಬೆಳೆಯುತ್ತಿದ್ದಾರೆ. 2 ಎಕರೆ ಫಸಲು ನೀಡುವ ಅಡಿಕೆ ತೋಟ, 5 ಎಕರೆ ಹೊಸ ಅಡಿಕೆ ತೋಟ, 3 ಎಕರೆಯಲ್ಲಿ ವಿವಿಧ ತಳಿಗಳ ಮಿಶ್ರ ಬೆಳೆಗಳ ತೋಟ ಮತ್ತು 5 ಎಕರೆ ಭತ್ತ ಹಾಗೂ ಅನಾನಸ್ ಕೃಷಿ ಮಾಡಿ ಯಶಸ್ವಿ ರೈತರಾಗಿದ್ದಾರೆ.

ಮಿಶ್ರ ಬೆಳೆ ತೋಟದಲ್ಲಿ ಒಂದರಿಂದ 4 ವರ್ಷಕ್ಕೆ ಫಸಲು ನೀಡುವಂತಹ ಗಿಡಗಳನ್ನು ನಾಟಿ ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ 30 ಅಡಿ ಅಂತರದಲ್ಲಿ ವಿವಿಧ ತಳಿಯ ತೆಂಗು, 18 ಅಡಿ ಅಂತರದಲ್ಲಿ ಸಪೋಟ, ಅಂತರ ಬೆಳೆಗಳಾಗಿ ನಿಂಬೆ, ನುಗ್ಗೆಗಿಡ, ಪೇರಲ, ಸೀತಾಫಲ, ಬೆಟ್ಟದ ನೆಲ್ಲಿಕಾಯಿ, ಚಕ್ಕೆಮೊಗ್ಗು, ಗೋಡಂಬಿ, ಅಂಟುರಹಿತ ಹಲಸು, ಮಾವು, ಜಂಬು ನೇರಳೆ ಹಣ್ಣಿನ ಗಿಡಗಳ ಜೊತೆಗೆ ತರಕಾರಿಗಳನ್ನು ಬೆಳೆಸಿದ್ದಾರೆ.

ADVERTISEMENT

‘ಸಕ್ಕರೆ ಕಾಯಿಲೆಗೆ ಆಯುರ್ವೇದ ಔಷಧವಾಗಿ ಬಳಕೆಯಾಗುವ ಬೆಟ್ಟದ ನೆಲ್ಲಿ ಹಾಗೂ ಜಂಬುನೇರಳೆಯ ಕೆಲವು ಗಿಡಗಳನ್ನು ಹಚ್ಚಿದ್ದೇನೆ. ಮುಂದೆ ಅದರ ಅಗತ್ಯತೆ ನೋಡಿ ಇತರ ಆಯುರ್ವೇದ ಗಿಡಗಳನ್ನು ಬೆಳೆಸುವ ಆಲೋಚನೆ ಇದೆ’ ಎನ್ನುತ್ತಾರೆ ನಾಗರಾಜ.

ವರ್ಷಪೂರ್ತಿ ಬೆಳೆ ನೀಡುವ ನುಗ್ಗೆ: ‘ನುಗ್ಗೆಕಾಯಿ ಗಿಡ ಹಚ್ಚಿದ ಒಂದು ವರ್ಷಕ್ಕೆ ಹೂ ಬಿಡಲು ಪ್ರಾರಂಭವಾಗುತ್ತದೆ. ವರ್ಷಪೂರ್ತಿ ನುಗ್ಗೆಕಾಯಿ ಬಿಡುತ್ತಲೇ ಇರುತ್ತದೆ. 15 ದಿನಕ್ಕೆ ಅಥವಾ ತಿಂಗಳಿಗೊಮ್ಮೆ ಆದಾಯ ಗಳಿಸಬಹುದು. ನುಗ್ಗೆಕಾಯಿ ಕೀಳಲು ಅನುಕೂಲವಾಗುವಂತೆ ಹೆಚ್ಚು ಎತ್ತರ ಬೆಳೆಯಲು ಬಿಡದೆ ತುದಿಯನ್ನು ಕತ್ತರಿಸುತ್ತಿರಬೇಕು’ ಎನ್ನುವ ಸಲಹೆ ಅವರದ್ದು.

ಪರಿಸರದ ಬಗ್ಗೆ ಕಾಳಜಿ ಹೊಂದಿರುವ ನಾಗರಾಜ ಅವರು ಹಣ್ಣಿನ ಬೆಳೆಗೆ ಹೆಚ್ಚು ಒತ್ತು ನೀಡುತ್ತಾರೆ. ಪ್ರಾಣಿ, ಪಕ್ಷಿಗಳಿಗೂ ಆಹಾರ ಒದಗಿಸುವ ಇರಾದೆ ಅವರದ್ದು.

ಸಾವಯವ ಗೊಬ್ಬರ ತಯಾರಿಕೆ: ಜೀವಾಮೃತ (ಸಗಣಿ ಮಿಶ್ರಿತ ಸಾವಯವ ಗೊಬ್ಬರ) ತಯಾರಿಸಿತೋಟಗಳು ಫಲವತ್ತಾಗಿರುವಂತೆ ನೋಡಿ ಕೊಳ್ಳುವ ಅವರು, ಗೊಬ್ಬರ ಮಾಡಿ ಕೊಳ್ಳುವ ಉದ್ದೇಶದಿಂದ 3 ದೇಸೀ ತಳಿಯ ಆಕಳು ಸಾಕಣೆ ಮಾಡಿದ್ದಾರೆ.

‘ಒಂದು ತೊಟ್ಟಿಯಲ್ಲಿ ನಮ್ಮ ತೋಟದಲ್ಲೇ ಉದುರಿ ಬಿದ್ದಿರುವ ಹಲಸಿನ ಎಲೆ, ಗೋಡಂಬಿ ಎಲೆ, ಮಾವಿನ ಎಲೆ, ತಂಗಿನ ಗರಿಗಳನ್ನು ಬಳಸಿ ಎರೆಹುಳು ಗೊಬ್ಬರವನ್ನು ತಯಾರಿಸಿಕೊಳ್ಳುತ್ತೇವೆ. ಮಾರುಕಟ್ಟೆಯಲ್ಲಿ ಟ್ರ್ಯಾಕ್ಟರ್ ಎರೆಹುಳು ಗೊಬ್ಬರಕ್ಕೆ ₹ 7 ಸಾವಿರ ಬೆಲೆಯಿದೆ. ನಾವೇ ಎರೆಹುಳು ಗೊಬ್ಬರ ಮಾಡಿಕೊಳ್ಳುವುದರಿಂದ ಸಾಕಾಷ್ಟು ಹಣ ಉಳಿತಾಯವಾಗುತ್ತದೆ. ಆರೋಗ್ಯಪೂರ್ಣ ಹಣ್ಣು, ತರಕಾರಿಗಳು ಸಿಗುತ್ತವೆ’ ಎಂದು ವಿವರಿಸುತ್ತಾರೆ ನಾಗರಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.