ADVERTISEMENT

ಕಾಳ್ಗಿಚ್ಚು ತಡೆಗೆ ಫೈರ್‌ಲೈನ್‌ ನಿರ್ಮಾಣ

ಮಂಡಗದ್ದೆ, ಮುತ್ತೂರು, ಕಸಬಾ ಕಾಡುಗಳಲ್ಲಿ ಆತಂಕ

ಶಿವಾನಂದ ಕರ್ಕಿ
Published 13 ಫೆಬ್ರುವರಿ 2020, 8:46 IST
Last Updated 13 ಫೆಬ್ರುವರಿ 2020, 8:46 IST
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಡನ್ನು ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಅರಣ್ಯ ಇಲಾಖೆ ಬೆಂಕಿ ನಂದಕ ಗೆರೆಗಳನ್ನು(ಫೈರ್ ಲೈನ್) ನಿರ್ಮಿಸಿರುವುದು.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಡನ್ನು ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಅರಣ್ಯ ಇಲಾಖೆ ಬೆಂಕಿ ನಂದಕ ಗೆರೆಗಳನ್ನು(ಫೈರ್ ಲೈನ್) ನಿರ್ಮಿಸಿರುವುದು.   

ತೀರ್ಥಹಳ್ಳಿ: ಬಿಸಿಲಿನ ತಾಪ ಏರುತ್ತಿದ್ದಂತೆ ಮಲೆನಾಡಿನಲ್ಲಿ ಕಾಳ್ಗಿಚ್ಚಿನ ಭೀತಿ ಹೆಚ್ಚಿದೆ. ಬೆಂಕಿಯಿಂದ ಕಾಡನ್ನು ರಕ್ಷಣೆ ಮಾಡುವುದು ಅರಣ್ಯ ಇಲಾಖೆಗೆ ಸವಾಲಾಗಿದೆ.ಬೆಂಕಿ ತಡೆಗಟ್ಟಲು ಅಗ್ನಿ ನಂದಕ ಗೆರೆಗಳನ್ನು (ಫೈರ್ ಲೈನ್) ನಿರ್ಮಿಸಲು ಅರಣ್ಯ ಇಲಾಖೆ ಕ್ರಮ ತೆಗೆದುಕೊಂಡಿದೆ.

ಪಶ್ಚಿಮ ಘಟ್ಟ ಸಾಲಿನ ಆಗುಂಬೆ ಸುತ್ತಮುತ್ತಲ ನಿತ್ಯ ಹರಿದ್ವರ್ಣದ ಪ್ರದೇಶವನ್ನು ಹೊರತುಪಡಿಸಿ ಎಲೆ ಉದುರುವ ಕಾಡುಗಳಲ್ಲಿ ಯಾವ ಹೊತ್ತಿನಲ್ಲಾದರೂ ಕಾಡಿಗೆ ಬೆಂಕಿ ತಗಲುವ ಆತಂಕ ಎದುರಾಗಿದೆ.

ತಾಲ್ಲೂಕಿನ ಮಂಡಗದ್ದೆ, ಮುತ್ತೂರು, ಅಗ್ರಹಾರ ಹಾಗೂ ಕಸಬಾ ಹೋಬಳಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಎಲೆ ಉದುರುವ ಮರಗಳಲ್ಲಿ ಹೊಸ ಚಿಗುರು ಚಿಮ್ಮುತ್ತಿದೆ. ನೆಲಕ್ಕೆ ಬಿದ್ದ ದರಗೆಲೆ ಬಿಸಿಲಿನ ತೀವ್ರತೆಗೆ ಒಣಗಿದ್ದು, ಬೆಂಕಿ ತಗುಲಿದರೆ ಇಡೀ ಕಾಡು ಸುಡುವ ಭೀಕರತೆ ಕಂಡುಬರುತ್ತಿದೆ.

ADVERTISEMENT

ಬೆಂಕಿ ನಂದಕ ಗೆರೆ ನಿರ್ಮಾಣಕ್ಕೆ ಚಾಲನೆ: ಕಾಡನ್ನು ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಬಿದ್ದಿರುವ ದರಗೆಲೆಗಳನ್ನು ಗುಡಿಸಿ ಬೆಂಕಿ ತಡೆಗಟ್ಟಲು ಅಗ್ನಿ ನಂದಕ ಗೆರೆಗಳನ್ನು (ಫೈರ್ ಲೈನ್) ನಿರ್ಮಿಸಲು ಅರಣ್ಯ ಇಲಾಖೆ ಕ್ರಮ ತೆಗೆದುಕೊಂಡಿದೆ. ಈ ಬಗ್ಗೆಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಇಲಾಖೆ ಕೈಗೊಂಡಿದೆ. ಮಳೆ ಅರಂಭಕ್ಕೆ ಇನ್ನೂ ಮೂರ್ನಾಲ್ಕು ತಿಂಗಳು ಬಾಕಿ ಇದ್ದು, ಅಲ್ಲಿಯವರೆಗೆ ಕಾಡಿಗೆ
ಬೆಂಕಿ ತಗುಲದಂತೆ ಎಚ್ಚರವಹಿಸುವ ಸವಾಲು ಎದುರಾಗಿದೆ. ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಐದಾರು ವರ್ಷಗಳ ಹಿಂದೆ ಬಿದಿರಿಗೆ ಕಟ್ಟೆ ರೋಗ ಬಂದಿದ್ದರಿಂದ ಒಣಗಿನಿಂತ ಬಿದಿರ ಹಿಂಡಿಲಿಗೆ ಬೆಂಕಿ ತಗುಲಿದ್ದರಿಂದ ಅಪಾರ ಪ್ರಮಾಣದ ಕಾಡು ನಾಶವಾಗಿತ್ತು. ಕಾಡಂಚಿನ ಮನೆ, ಅಡಿಕೆ ತೋಟಗಳಿಗೆ ಹಾನಿ ಸಂಭವಿಸಿತ್ತು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದ ಕಾಡುಪ್ರಾಣಿಗಳು ಜೀವ ಕಳೆದುಕೊಂಡಿದ್ದವು.

ಅರಣ್ಯ ಇಲಾಖೆ ರೈತರ ನಡುವೆ ಸಮನ್ವಯದ ಕೊರತೆ: ಅಕ್ರಮ ಭೂ ಒತ್ತುವರಿ ವಿರುದ್ಧ ಕಠಿಣ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಈಗಾಗಲೇ ತಾಲ್ಲೂಕಿನ ಅನೇಕ ರೈತರು ಭೂ ಒತ್ತುವರಿ ಪ್ರಕರಣವನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ. ಸಣ್ಣಪುಟ್ಟ ರೈತರ ಅಲ್ಪ ಸ್ವಲ್ಪ ಒತ್ತುವರಿಯನ್ನು ಅರಣ್ಯ ಇಲಾಖೆ ಸಹಿಸಿಕೊಳ್ಳುತ್ತಿಲ್ಲ. ಇಲಾಖೆ ಹಾಗೂ ರೈತರ ನಡುವಿನ ಸಂಘರ್ಷ ಹೆಚ್ಚುತ್ತಿದೆ. ರೈತರ ಸಹಕಾರವಿಲ್ಲದೇ ಅರಣ್ಯ ರಕ್ಷಣೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿರುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕಾಡು ಕಾಯಲು ಸಿಬ್ಬಂದಿ ಕೊರತೆ: ಅರಣ್ಯ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಕನಿಷ್ಠ 2 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಒಬ್ಬ ಅರಣ್ಯ ರಕ್ಷಕನನ್ನು ನೇಮಿಸಲಾಗಿದೆ. ಹೆಚ್ಚು ವಿಸ್ತಾರದ ಅರಣ್ಯ ಪ್ರದೇಶದಲ್ಲಿ ಹಾನಿಯಾಗುವ ಪ್ರಮಾಣವನ್ನು ತಡೆಗಟ್ಟಲು ಕಾವಲುಗಾರರಿಂದ ಸಾಧ್ಯವಾಗುತ್ತಿಲ್ಲ. ರೈತರು, ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಸಂಭವಿಸುವ ಸಂಘರ್ಷ ಕಾಡಿಗೆ ಬೆಂಕಿ ಇಡುವ ಹಂತಕ್ಕೆ ಹೋದರೂ ಅಚ್ಚರಿ ಇಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.