ಶಿವಮೊಗ್ಗ: ‘ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ಪಾಲಿಕೆಯು ಆಹಾರ ದಸರಾ ಅಂಗವಾಗಿ ಸೋಮವಾರ ಆಯೋಜಿಸಿದ್ದ ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ಬಾಳೆ ಹಣ್ಣು ತಿನ್ನುವ ಸ್ಪರ್ಧೆ ನೋಡುಗರ ಬಾಯಲ್ಲಿ ನೀರುಣಿಸಿತು.
ಈ ಬಾರಿಯ ದಸರಾದಲ್ಲಿ ಸಾರ್ವಜನಿಕರೊಂದಿಗೆ ಮೆಸ್ಕಾಂ ಇಲಾಖೆಯ ಪುರುಷ ಹಾಗೂ ಮಹಿಳಾ ಸಿಬ್ಬಂದಿಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದು ವಿಶೇಷವಾಗಿತ್ತು. ಪ್ರತ್ಯೇಕ ಸ್ಪರ್ಧೆಗಳು ನಡೆದವು.
ಸ್ಪರ್ಧೆಯ ಎರಡು ನಿಮಿಷದ ಅವಧಿಯಲ್ಲಿ ಮೆಸ್ಕಾಂ ಇಲಾಖೆಯ ಸಹಾಯಕ ಲೆಕ್ಕಾಧಿಕಾರಿ ಎಲ್. ಜಾನಕಿ ಎಂಟು ಬಾಳೆಹಣ್ಣು ಹಾಗೂ ಪವರ್‌ಮೆನ್ ಎಲ್. ರಾಕೇಶ್ ಗೌಡ ಹತ್ತು ಇಡ್ಲಿ ತಿಂದು ಪ್ರಥಮ ಸ್ಥಾನ ಪಡೆದರು.
ಪವರ್‌ಮೆನ್‌ಗಳಾದ ಆರ್. ಸಂದೀಪ ಎರಡು ನಿಮಿಷಕ್ಕೆ ಐದುವರೆ ಇಡ್ಲಿ ತಿಂದು ದ್ವಿತೀಯ ಸ್ಥಾನ ಪಡೆದರೆ, ಇ. ಸುಮಿತ್ ಸಾಗರ್ ನಾಲ್ಕು ಮುಕ್ಕಾಲು ಇಡ್ಲಿ ತಿನ್ನುವ ಮೂಲಕ ತೃತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಮೆಸ್ಕಾಂ ಸಿಬ್ಬಂದಿ ಪಿ.ವಿಶಾಲಾಕ್ಷಿ ಏಳು ಮುಕ್ಕಾಲು, ಎಸ್.ಶೆಟ್ಟಮ್ಮ ಏಳು ಬಾಳೆ ಹಣ್ಣು ತಿಂದು ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದರು.
ಸಾರ್ವಜನಿಕ ಪುರುಷರ ವಿಭಾಗದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 40 ಜನರು ಭಾಗವಹಿಸಿದ್ದರು. ಇದರಲ್ಲಿ ಮದನ್ ಎರಡು ನಿಮಿಷಕ್ಕೆ ಹತ್ತು ಮುಕ್ಕಾಲು ಇಡ್ಲಿ ತಿಂದು ಪ್ರಥಮ ಸ್ಥಾನ, ಪ್ರವೀಣ್ ಹತ್ತುವರೆ ಇಡ್ಲಿ, ಮಣಿಕಂಠ ಒಂಬತ್ತು ಇಡ್ಲಿ ಸೇವಿಸಿ ಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನ ಪಡೆದರು.
ಮಹಿಳಾ ವಿಭಾಗದಲ್ಲಿ 15 ಜನರು ಭಾಗವಹಿಸಿದ್ದರು. ಧನಲಕ್ಷ್ಮಿ ಹನ್ನಂದುವರೆ ಇಡ್ಲಿಯನ್ನು ಎರಡು ನಿಮಿಷಕ್ಕೆ ತಿಂದು ಪ್ರಥಮ ಸ್ಥಾನ ಪಡೆದರು. ಬಿ.ಜಿ.ಗೀತಾ ಹತ್ತುವರೆ ಇಡ್ಲಿ, ಚಂದ್ರಪ್ಪ ಗುಡ್ರುಕೊಪ್ಪ ಒಂಬತ್ತು ಮುಕ್ಕಾಲು ಇಡ್ಲಿ ತಿಂದು ಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನ ಪಡೆದರು.
ಆರೋಗ್ಯಾಧಿಕಾರಿಗಳಾದ ಎಂ.ಸಿ.ಉಮಾ, ಎಚ್.ಎಂ.ಉಮಾ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ದಸರಾ ಉದ್ದೇಶವೇ ಅವಕಾಶ ಕಲ್ಪಿಸುವುದು. ಇಲ್ಲಿ ಸಾರ್ವಜನಿಕರೊಂದಿಗೆ ಮೆಸ್ಕಾಂ ಸಿಬ್ಬಂದಿಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ದಸರಾಗೆ ಮೆರಗು ಹೆಚ್ಚಿದೆಎಸ್.ಎನ್.ಚನ್ನಬಸಪ್ಪ ಶಾಸಕ
ಸೈನಿಕರಂತೆಯೇ ಮೆಸ್ಕಾಂ ಸಿಬ್ಬಂದಿಯೂ ಶ್ರಮವಹಿಸುತ್ತಾರೆ. ಇಂತಹ ಕಾರ್ಯಕ್ರಮಗಳಿಂದ ಒತ್ತಡ ಕಡಿಮೆ ಆಗಲಿದೆಎಚ್.ಆರ್.ವಿರೇಂದ್ರ ಇಇ ಮೆಸ್ಕಾಂ
ಎಲ್ಲರೂ ಆರೋಗ್ಯ ಕಾಳಜಿಗೆ ಒತ್ತು ನೀಡಬೇಕು. ಇಂತಹ ಕಾರ್ಯಕ್ರಮಗಳಿಂದ ಮಾನಸಿಕ ಒತ್ತಡ ಕಡಿಮೆ ಆಗಲಿದೆಡಾ.ಕೆ.ಎಸ್.ನಟರಾಜ ಡಿಎಚ್‌ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.