ಶಿಕಾರಿಪುರ: ಶಿವಮೊಗ್ಗ –ರಾಣೇಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಸುರಕ್ಷತಾ ಮಾನದಂಡ ಬಳಸದ ಕಾರಣಕ್ಕೆ ತಾಲ್ಲೂಕಿನ ಯರೇಕಟ್ಟೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಯರೇಕಟ್ಟೆ ಗ್ರಾಮದ ಮರಾಠಿ ಗೌಳಿಗಳು ವಾಸವಿರುವ ಪ್ರದೇಶದ ಪಕ್ಕದಲ್ಲಿ ರೈಲ್ವೆ ಮಾರ್ಗ ಹಾದುಹೋಗಿದೆ. ಅಲ್ಲಿ ಅಂದಾಜು 1.5 ಕಿ.ಮೀ. ನಷ್ಟು ದೂರ ರೈಲು 20ರಿಂದ 50 ಅಡಿಗಳಷ್ಟು ಆಳದಲ್ಲಿ ಸಾಗುತ್ತದೆ. ಅದಕ್ಕಾಗಿ ಗುಂಡಿ ತೆಗೆಯಲಾಗಿದೆ.
ಆಳದ ಗುಂಡಿಯಿಂದ ನೂರು ಮೀಟರ್ ದೂರದಲ್ಲೇ ಗೌಳಿಗರು ವಾಸವಾಗಿದ್ದು, ಅವರ ಮಕ್ಕಳು ಗುಂಡಿಯಲ್ಲಿ ಆಟವಾಡುತ್ತಾ ಬೀಳುತ್ತಿದ್ದಾರೆ. ಅವರನ್ನು ಹಗ್ಗದಿಂದ ಮೇಲೆತ್ತಬೇಕಿದೆ. ಗುಂಡಿಗೆ ಇಳಿಯುವುದು – ಮೇಲೆ ಹತ್ತುವುದು ಮಕ್ಕಳಿಗೆ ಆಟವಾಗಿದ್ದು, ಹಲವರು ಗಾಯ ಮಾಡಿಕೊಂಡು ಚಿಕಿತ್ಸೆಯನ್ನೂ ಪಡೆದಿದ್ದಾರೆ.
ಗೌಳಿಗರ ಜಾನುವಾರುಗಳೂ ಗುಂಡಿಯಲ್ಲಿ ಬಿದ್ದಿದ್ದು, ಅವುಗಳನ್ನು ಕಿ.ಮೀ. ದೂರದವರೆಗೂ ಸಾಗಿ ಮೇಲಕ್ಕೆ ಹತ್ತಿಸಲಾಗುತ್ತಿದೆ. ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನೇಕ ಗುಂಡಿಗಳು ತೆಗೆದಿದ್ದು ಅದರಲ್ಲಿ ಮಳೆಗಾಲದ ನೀರು ನಿಂತಿದ್ದು ಅದರಲ್ಲೂ ಮಕ್ಕಳು ಆಟವಾಡಲು ತೆರಳಿದರೆ ಅಪಾಯ ಸಂಭವಿಸಬಹುದು. ಅದಕ್ಕಾಗಿ ಕಾಮಗಾರಿ ವ್ಯಾಪ್ತಿಯಲ್ಲಿ ಸುರಕ್ಷತಾ ಮಾನದಂಡ ಅಳವಡಿಸಿಕೊಳ್ಳಬೇಕಿದೆ.
ರೈಲ್ವೆ ಕಾಮಗಾರಿ ಮಾರ್ಗದಲ್ಲಿ ಜನರಿಗೆ ತೊಂದರೆ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎನ್ನುತ್ತಾರೆ ಯರೇಕಟ್ಟೆ ನಿವಾಸಿ ಮುತ್ತುರಾಜ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.