ಶಿವಮೊಗ್ಗ: ‘ಪರಿಸರ ಮತ್ತು ವನ್ಯಜೀವಿ ಸಂಪತ್ತು ರಕ್ಷಿಸಲು ನಿರೀಕ್ಷಿತ ಮಟ್ಟದಲ್ಲಿ ತಂತ್ರಜ್ಞಾನ ಬಳಕೆ ಆಗುತ್ತಿಲ್ಲ. ಅರಣ್ಯ ಸಿಬ್ಬಂದಿ ತಂತ್ರಜ್ಞಾನ ಬಳಕೆಯ ಹೆಚ್ಚಿನ ತರಬೇತಿ ಪಡೆದು ಕಾರ್ಯ ಪ್ರವೃತ್ತರಾಗಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ಅಧ್ಯಕ್ಷ ಮಂಜುನಾಥ ನಾಯಕ್ ಸಲಹೆ ನೀಡಿದರು.
ರಾಜ್ಯ ಅರಣ್ಯ ಇಲಾಖೆಯಿಂದ ಇಲ್ಲಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಶ್ರೀಗಂಧ ಕೋಠಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅರಣ್ಯ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರವೂ ಬೇಕು. ಕಳೆದ 10 ವರ್ಷದಲ್ಲಿ 20 ಮಂದಿ ಅರಣ್ಯ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ನಮ್ಮಲ್ಲಿ ಎಷ್ಟೇ ತಂತ್ರಜ್ಞಾನ ಮುಂದುವರಿದರೂ ಇಂತಹ ಅನಾಹುತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ರಾಜ್ಯದ 40 ವರ್ಷದ ಇತಿಹಾಸದಲ್ಲಿ 62 ಅರಣ್ಯ ಅಧಿಕಾರಿಗಳು ಮೃತಪಟ್ಟಿದ್ದಾರೆ. ಪ್ರಾಣಿ ಮತ್ತು ಮಾನವ ಸಂಘರ್ಷದಿಂದ 35 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 6,300ಕ್ಕೂ ಹೆಚ್ಚು ಆನೆಗಳಿವೆ. ಆದರೆ ಇಡೀ ದೇಶದ ಮಾನವ ಸಂಘರ್ಷದ ಪ್ರಕರಣಗಳನ್ನು ಗಮನಿಸಿದರೆ ರಾಜ್ಯದಲ್ಲಿ ಆದ ಅನಾಹುತಗಳು ತೀರ ಕಡಿಮೆ ಇವೆ’ ಎಂದು ಆನೆ ಯೋಜನೆಯ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಮಾಹಿತಿ ನೀಡಿದರು.
‘ಅರಣ್ಯ ಇಲಾಖೆ ಸೇವೆಯಲ್ಲಿರುವ ಪ್ರತಿಯೊಬ್ಬ ಅಧಿಕಾರಿಯ ಜೀವವೂ ಅಮೂಲ್ಯ. ಇಲ್ಲಿ ಅರಣ್ಯ ಭೂಮಿ, ಅಭಿವೃದ್ಧಿಯ ವಿಚಾರದಲ್ಲಿ ಅಧಿಕಾರಿಗಳಿಗೆ ಒತ್ತಡ ಇದೆ. ಆದ್ದರಿಂದ, ಸಿಬ್ಬಂದಿ ವರ್ಗ ಜಾಗೃತಿಯಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾ ವೃತ್ತ ಮುಖ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ತಿಳಿಸಿದರು.
ಜಿಲ್ಲಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್.ಅಜ್ಜಯ್ಯ ಕರ್ತವ್ಯದ ಸಂದರ್ಭದಲ್ಲಿ ಪ್ರಾಣ ಅರ್ಪಿಸಿದ ಸಿಬ್ಬಂದಿಯ ಪಟ್ಟಿ ವಾಚಿಸಿದರು. ಅತಿಥಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಗುಚ್ಛ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್, ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.
‘ನಿಸರ್ಗ ಕಾಯುವ ಸೇನೆ’
‘ಸೈನಿಕರ ಮಾದರಿಯಲ್ಲಿ ಅರಣ್ಯ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಇದು ನಿಸರ್ಗ ಕಾಯುವ ಸೇನೆ. ಶರಾವತಿ ಸಂತ್ರಸ್ತರ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಉತ್ತಮ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಅತಿಕ್ರಮಣ ಭೂಮಿ ಅರಣ್ಯ ಸಂಬಂಧಿಸಿದ ಪ್ರಕರಣಗಳು ಬಾಕಿ ಇದ್ದು ಅದನ್ನು ಬಗೆಹರಿಸಲು ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.
ಜೀವ ರಕ್ಷಣೆಗೆ ತಂತ್ರಜ್ಞಾನ ಬಳಕೆ
‘ಅರಣ್ಯ ಇಲಾಖೆ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಕಾಡಾನೆ ಪತ್ತೆ ಹಾಗೂ ಕಾಳ್ಗಿಚ್ಚು ತಡೆಯಲು ಟಾಸ್ಕ್‌ಫೋರ್ಸ್ ಸಿಬ್ಬಂದಿ ಜತೆಗೆ ತಂತ್ರಜ್ಞಾನವನ್ನೂ ಬಳಸಲಾಗುತ್ತಿದೆ. ಇದರಿಂದ ಸ್ಥಳೀಯರು ಹಾಗೂ ಸಿಬ್ಬಂದಿ ವರ್ಗದ ಜೀವ ರಕ್ಷಣೆಗೆ ಒತ್ತು ನೀಡಲಾಗಿದೆ’ ಎಂದು ಆನೆ ಯೋಜನೆಯ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ತಿಳಿಸಿದರು. ‘ಮುಖ್ಯವಾಗಿ ಆನೆ ಪತ್ತೆಗೆ ಎಐ ಕ್ಯಾಮೆರಾ ಹಾಗೂ ಜಿಎಸ್‌ಎಂ ಕ್ಯಾಮೆರಾ ರೇಡಿಯೊ ಕಾಲರ್ ಲೇಸರ್ ತಂತ್ರಜ್ಞಾನ ಜಿಪಿಎಸ್ ಅಳವಡಿಕೆ ಸೇರಿದಂತೆ ಶ್ವಾನದಳವನ್ನೂ ಬಳಸಿಕೊಳ್ಳಲಾಗುತ್ತಿದೆ. ಇನ್ನೂ ಹೆಚ್ಚಿನ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.