ADVERTISEMENT

ಅರಣ್ಯ ಹಕ್ಕು ಕಾಯ್ದೆ: ತಾರತಮ್ಯ ಸರಿಪಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 18:09 IST
Last Updated 14 ಅಕ್ಟೋಬರ್ 2020, 18:09 IST
ಸಾಗರದಲ್ಲಿ ಬುಧವಾರ ನಡೆದ ಸಮಾಲೋಚನಾ ಕಾರ್ಯಾಗಾರವನ್ನು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಉದ್ಘಾಟಿಸಿದರು. ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಇದ್ದರು.
ಸಾಗರದಲ್ಲಿ ಬುಧವಾರ ನಡೆದ ಸಮಾಲೋಚನಾ ಕಾರ್ಯಾಗಾರವನ್ನು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಉದ್ಘಾಟಿಸಿದರು. ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಇದ್ದರು.   

ಸಾಗರ: ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ವಿತರಿಸಲು ಅದರಲ್ಲಿರುವ ಕೆಲವು ನಿಬಂಧನೆಗಳಲ್ಲಿನ ತಾರತಮ್ಯ
ಗಳು ಅಡ್ಡಿಯಾಗಿವೆ. ಈ ತಾರತಮ್ಯ
ಗಳನ್ನು ನಿವಾರಿಸುವ ಸಂಬಂಧ ಸಂಸದ ಬಿ.ವೈ.ರಾಘವೇಂದ್ರ ಅವರ ಜೊತೆ ಚರ್ಚಿಸಲಾಗಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೇಳಿದರು.

ಇಲ್ಲಿನ ವರದಶ್ರೀ ಸಭಾಂಗಣದಲ್ಲಿ ಭೀಮನಕೋಣೆಯ ಗ್ರಾಮ ಅರಣ್ಯ ಸಮಿತಿ, ವೃಕ್ಷಲಕ್ಷ ಆಂದೋಲನ ಕರ್ನಾಟಕ ಸಂಸ್ಥೆಯು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬುಧವಾರ ಏರ್ಪಡಿಸಿದ್ದ ಕಾನು-ಜೇನು, ಬಿದಿರು ಹಾಗೂ ಮಿಡಿಮಾವು ಅಭಿವೃದ್ಧಿ ಸಂರಕ್ಷಣೆ ಕುರಿತ ಸಮಾಲೋಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯಲು ಪರಿಶಿಷ್ಟ ಪಂಗಡದವರು ಭೂಮಿಯ ಐದು ವರ್ಷಗಳ ಹಿಂದಿನ ಸ್ವಾಧೀನದ ಬಗ್ಗೆ ದಾಖಲೆ ಒದಗಿಸಿದರೆ ಸಾಕಾಗುತ್ತದೆ. ಇತರೆ ವರ್ಗದವರು ಮೂರು ತಲೆಮಾರುಗಳ ಸಾಕ್ಷ್ಯ ಒದಗಿಸಬೇಕು ಎಂಬ ನಿಬಂಧನೆ ಕಾಯ್ದೆಯಲ್ಲಿದೆ. ಈ ತಾರತಮ್ಯ ಹಲವು ವೈಮನಸ್ಸುಗಳಿಗೆ ದಾರಿ ಮಾಡಿಕೊಟ್ಟಿದ್ದು ಇದಕ್ಕೆ ತೆರೆ ಎಳೆಯಬೇಕಿದೆ. ಅರಣ್ಯವನ್ನು ಉಳಿಸಿಕೊಂಡೆ ಅಲ್ಲಿನ ಮೂಲ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಕೆಲಸವಾಗಬೇಕಿದೆ ಎಂದರು.

ADVERTISEMENT

‘ಕಾನು-ಜೇನು, ಬಿದಿರು, ಮಾವು ಇವುಗಳೆಲ್ಲ ಒಂದೇ ಪ್ರದೇಶದಲ್ಲಿ ನೋಡಲು ಸಿಗುವುದು ಮಲೆನಾಡು ಹಾಗೂ ಪಶ್ಚಿಮಘಟ್ಟದ ವೈಶಿಷ್ಟ್ಯ. ಮಲೆನಾಡಿನ ಕೃಷಿಕರು ಕೇವಲ ಅಡಿಕೆ ಅಥವಾ ಭತ್ತದ ಬೆಳೆಗೆ ಸೀಮಿತವಾಗದೆ ಇತರ ಉಪ ಬೆಳೆಗಳಾದ ಕೋಕೋ, ಕಾಳುಮೆಣಸು, ಬಿದಿರು, ರಬ್ಬರ್, ಜೇನು ಸಾಕಾಣಿಕೆಯತ್ತ ಗಮನ ಹರಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇಂತಹ ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮ ಮಂಡಳಿ ಕ್ರಿಯಾಯೋಜನೆ ರೂಪಿಸಲಿದೆ’ ಎಂದು ತಿಳಿಸಿದರು.

‘ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿನ ತಜ್ಞರು ಹಳ್ಳಿ
ಗಳಿಗೆ ಬರಬೇಕು. ಅವರ ಜ್ಞಾನ
ಸಾಮಾನ್ಯ ರೈತರಿಗೂ ತಲುಪುವಂತಾಗ
ಬೇಕು. ಹಿಂದಿನ ತಲೆಮಾರಿನವರು ಬೆಳೆಸಿದ ಅಪರೂಪದ ತಳಿಯ ಮಾವಿನ ಮಿಡಿ ಮರಗಳ ಫಲವನ್ನು ನಾವು ಉಣ್ಣುತ್ತಿದ್ದೇವೆ. ಆದರೆ ಮುಂದಿನ ತಲೆಮಾರಿಗೆ ಬೇಕಾದ ಸಸಿಗಳನ್ನು ನೆಡುವ ಪ್ರಜ್ಞೆ ಮತ್ತು ಜಾಗೃತಿಯನ್ನು ಈ ತಲೆಮಾರಿನವರಲ್ಲಿ ರೂಢಿಸಬೇಕಿದೆ’ ಎಂದರು.

ದಿಕ್ಸೂಚಿ ಭಾಷಣ ಮಾಡಿದ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ‘ಮಲೆನಾಡು ಪ್ರದೇಶದ ಸಮೃದ್ಧಿಯನ್ನು ಉಳಿಸಿಕೊಂಡೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಮಾದರಿ ನಮಗೆ ಬೇಕಿದೆ. ತೋಟಗಾರಿಕೆ, ಕೃಷಿ, ಅರಣ್ಯ, ಜಲಸಂವರ್ಧನೆ, ಇಂಧನ, ಪಶುಸಂಗೋಪನೆ ಇವುಗಳನ್ನು ಕಾಪಿಟ್ಟುಕೊಂಡು ಅಭಿವೃದ್ಧಿ ಸಾಧಿಸಿದರೆ ಮಾತ್ರ ಅದು ಸುಸ್ಥಿರ ಅಭಿವೃದ್ಧಿ’ ಎಂದು ಅಭಿಪ್ರಾಯಪಟ್ಟರು.

‘ಸುಸ್ಥಿರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸಮಗ್ರ ಯೋಜನೆ ಜಾರಿಯಾಗಬೇಕು. ಐದು ಸಾವಿರ ರೈತ ಕುಟುಂಬಗಳು, 20 ಸಾವಿರ ಕೃಷಿ ಕಾರ್ಮಿಕರಿಗೆ ಅನುಕೂಲವಾಗುವ ಈ ಯೋಜನೆಯನ್ನು ₹ 25 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲು ಸಾಧ್ಯವಿದ್ದು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಈ ಬಗ್ಗೆ ಗಮನ ಹರಿಸಬೇಕು’ ಎಂದು ಅವರು ಮನವಿ ಮಾಡಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯ ಬಿ.ಎಚ್. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ನವಿಲೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ನಾಯ್ಕ್, ಡಿಎಫ್ಒ ಮೋಹನ್ ಕುಮಾರ್ ಇದ್ದರು. ಕವಲಕೋಡು ವೆಂಕಟೇಶ್ ನಿರೂಪಿಸಿದರು. ವಿವಿಧ ಗೋಷ್ಠಿಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.