ADVERTISEMENT

ಫೌಂಡ್ರಿ ಉದ್ಯಮ: ಶಿವಮೊಗ್ಗಕ್ಕೆ ಜಾಗತಿಕ ಮನ್ನಣೆ

ಎಂಜಿನಿಯರ್ಸ್‌ ದಿನಾಚರಣೆಯಲ್ಲಿ ಎಫ್.ಐ.ಸಿ.ಸಿ.ಐ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:19 IST
Last Updated 16 ಸೆಪ್ಟೆಂಬರ್ 2022, 4:19 IST
ಶಿವಮೊಗ್ಗದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಎಂಜಿನಿಯರ್ಸ್ ದಿನಾಚರಣೆಯಲ್ಲಿ ಕಾರ್ಯಕ್ರಮವನ್ನು ಎಫ್‌.ಐ.ಸಿ.ಸಿ.ಐ ಅಧ್ಯಕ್ಷ ಉಲ್ಲಾಸ್ ಕಾಮತ್ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಎಂಜಿನಿಯರ್ಸ್ ದಿನಾಚರಣೆಯಲ್ಲಿ ಕಾರ್ಯಕ್ರಮವನ್ನು ಎಫ್‌.ಐ.ಸಿ.ಸಿ.ಐ ಅಧ್ಯಕ್ಷ ಉಲ್ಲಾಸ್ ಕಾಮತ್ ಉದ್ಘಾಟಿಸಿದರು   

ಶಿವಮೊಗ್ಗ: ವಿಶ್ವದ ಫೌಂಡ್ರಿ ಉದ್ಯಮ ಶಿವಮೊಗ್ಗದ ಕಡೆ ನೋಡುತ್ತದೆ. ಇಲ್ಲಿ ತಯಾರಾಗುವ ಬಿಡಿಭಾಗಗಳು ವಿಶ್ವಮಾನ್ಯವಾಗಿವೆ. ಅದೇ ರೀತಿ ಇನ್ನೂ ಮೂರ್ನಾಲ್ಕು ವಿಭಾಗಗಳ ಇಲ್ಲಿ ಸ್ಥಾಪಿಸಿ ಇಲ್ಲಿನ ಜನರಿಗೇ ಉದ್ಯೋಗ ನೀಡಿದಲ್ಲಿ ನಗರದ ಅಭಿವೃದ್ಧಿಯ ಜೊತೆಗೆ ಉದ್ಯಮಿಗಳು ಅನುಕೂಲ ಪಡೆಯುತ್ತಾರೆ ಎಂದು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಇಂಡಸ್ಟ್ರಿ (ಎಫ್ಐಸಿಸಿಐ) ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಗುರುವಾರ ಸಂಘದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಎಂಜಿನಿಯರ್ಸ್ ಡೇ ಮತ್ತು ಭಾರತ ರತ್ನ ಡಾ.ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ, ಪ್ರಶಸ್ತಿ ಪ್ರದಾನ ಹಾಗೂ ಸಂಘದ ನೂತನ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಐಟಿ ಬಿಟಿ ಕಂಪೆನಿಗಳಿಗೆ ಮಾತ್ರ ಅವಕಾಶ ಇದೆ ಎಂಬುದನ್ನು ಮನಗಾಣದೇ ಉತ್ಪಾದನಾ ವಲಯದಲ್ಲೂ ಉದ್ಯಮಿಗಳು ತೊಡಗಿಸಿಕೊಳ್ಳಬೇಕು. ಯುವ ಶಕ್ತಿ ಸದ್ಬಳಕೆ ಮಾಡಿಕೊಳ್ಳಬೇಕು. ಅವರಿಗೆ ಬೆಂಬಲ ಕೊಡಬೇಕಾಗಿದೆ. ಉದ್ಯಮಗಳನ್ನು ಸ್ಥಾಪಿಸಿ ಕೆಲಸ ಕೊಡುವಂತಿರಬೇಕು ಎಂದರು.

ADVERTISEMENT

‘ನಾನು ಕೂಡ ಶಿವಮೊಗ್ಗದಲ್ಲೇ ಹುಟ್ಟಿದವನು. ಮಲೆನಾಡಿನಲ್ಲಿ ಆರಂಭಗೊಂಡ ಉದ್ಯಮಗಳು ಕೂಡ ರಾಷ್ಟ್ರಮಟ್ಟದಲ್ಲಿ ಯಶಸ್ವಿಯಾಗಬೇಕೆನ್ನುವುದು ನನ್ನ ಆಸೆ. ವಾಸ್ತವವಾಗಿ ಉದ್ಯಮಿಗಳು 24 ಗಂಟೆ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ವಿಶ್ರಾಂತಿ ಇರುವುದೇ ಇಲ್ಲ. ಬೇರೆ ಕಡೆ ಕೆಲಸ ಮಾಡುವುದಕ್ಕಿಂತ ಹತ್ತು ಜನರಿಗೆ ಕೆಲಸ ಕೊಟ್ಟರೆ ಅವನೇ ಶ್ರೇಷ್ಠ ಪ್ರಜೆ ಎಂದು ನನ್ನ ಭಾವನೆ. ಭಾರತದಲ್ಲಿ ಕೆಲಸ ಕೊಡುವವರ ಸಂಖ್ಯೆ ಜಾಸ್ತಿಯಾಗಬೇಕೆನ್ನುವುದು ನನ್ನ ಆಸೆ. ಈ ನಿಟ್ಟಿನಲ್ಲಿ ಉದ್ಯಮಿಗಳು ಪ್ರಯತ್ನಿಸಬೇಕು’ ಎಂದರು.

‘ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಯೋಜನೆಗಳ ಮೂಲಕ ನಾವು ಯಾವ ದೇಶಗಳ ಬೆಂಬಲವೂ ಇಲ್ಲದೇ ಸ್ವಂತ ಕಾಲ ಮೇಲೆ ನಿಲ್ಲುವ ಸಾಮರ್ಥ್ಯ ಪಡೆದಿದ್ದೇವೆ’ ಎಂದರು.

ಇಲ್ಲಿ ಉತ್ತಮ ತಂತ್ರಜ್ಞಾನ ಇದೆ. ಕೈಗಾರಿಕೆಗಳನ್ನು ಬೆಂಬಲಿಸುವ ಜನರಿದ್ದಾರೆ. ಬೆಂಗಳೂರಿಗೆ ಬಂದು ಶಿವಮೊಗ್ಗದ ಜನ ರಿಯಲ್ ಎಸ್ಟೇಟ್ ಮಾಡಬಹುದಷ್ಟೇ. ಕೈಗಾರಿಕೆ ಮಾಡುವುದುಕಷ್ಟಸಾಧ್ಯ. ಅದರ ಬದಲು ಶಿವಮೊಗ್ಗದಲ್ಲೇ ಉತ್ತಮ ವಾತಾವರಣ ಇದೆ. ಇಲ್ಲೇ ಕೈಗಾರಿಕೆಗಳನ್ನು ಸ್ಥಾಪಿಸಿ ಎಂದರು.

ಈ ಸಂದರ್ಭದಲ್ಲಿ 2022 ನೇ ಸಾಲಿನ ಕೈಗಾರಿಕಾ ಪ್ರಶಸ್ತಿ ಮೆ. ಸಂತೋಷ್ ಎಂಟರ್ ಪ್ರೈಸಸ್, ಮೆ. ಸಹ್ಯಾದ್ರಿ ಪಾಲಿಮರ್ಸ್, ಮೆ. ರಾಜಾ ಎಂಜಿನಿಯರಿಂಗ್ ವರ್ಕ್ಸ್‌ಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಜೆನ್ನಿ ರಿಟ್ರೇಡರ್ಸ್ ನ ಕೆ. ಗಂಗಾಧರ್, ಮುರುಗೇಶ್ ಟೆಕ್ನಾಲಜೀಸ್ ನ ಯು. ಮಹೇಂದ್ರ ಅವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಉಪಾಧ್ಯಕ್ಷ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಪ್ರಮುಖರಾದ ಜಿ. ವಿಜಯಕುಮಾರ್, ಮಧುಸೂದನ್ ಐತಾಳ್, ಅಶ್ವತ್ಥನಾರಾಯಣ ಶೆಟ್ಟಿ, ಜಿ.ಆರ್. ವಾಸುದೇವ್, ಎಂ. ರಾಜು, ಬಿ.ಆರ್. ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.