ADVERTISEMENT

ಶಿವಮೊಗ್ಗ: ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರು, ನಿರ್ಗತಿಕರಿಗೆ ಉಚಿತ ಆಹಾರ

​ಪ್ರಜಾವಾಣಿ ವಾರ್ತೆ
Published 12 ಮೇ 2021, 12:42 IST
Last Updated 12 ಮೇ 2021, 12:42 IST
ಇಂದಿರಾ ಕ್ಯಾಟೀನ್ ಸಂಗ್ರಹ ಚಿತ್ರ
ಇಂದಿರಾ ಕ್ಯಾಟೀನ್ ಸಂಗ್ರಹ ಚಿತ್ರ   

ಶಿವಮೊಗ್ಗ: ನಗರದ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಹಾಗೂ ವಿವಿಧ ಭಾಗಗಳಿಂದ ವಲಸೆ ಬಂದು ದುಡಿಮೆ ಇಲ್ಲದೆ ಇರುವ ಜನರಿಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಉಚಿತ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

ವಿನೋಬನಗರ, ಬಿ.ಎಚ್‌.ರಸ್ತೆ ಡಿಡಿಪಿಐ ಕಚೇರಿ ಬಳಿ, ಬಸ್‌ನಿಲ್ದಾಣದ ಹಿಂಭಾಗ, ಸಾಗರ ರಸ್ತೆಯಲ್ಲಿ ನಾಲ್ಕು ಇಂದಿರಾ ಕ್ಯಾಂಟೀನ್‌ಗಳಿವೆ. ಪ್ರತಿದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುವುದು. ಮೇ 12ರಿಂದಲೇ ಕಾರ್ಯ ಆರಂಭಿಸಿವೆ. ಮೊದಲ ದಿನ 250 ಜನರು ಊಟ, ಉಪಾಹಾರ ಮಾಡಿದ್ದಾರೆ. ಸಂಖ್ಯೆ ಹೆಚ್ಚಲಕ್ಕೆ ಅನುಗುಣವಾಗಿ ಸಿದ್ದತೆ ಮಾಡಿಕೊಳ್ಳಲಾಗುವುದು. ಪಾಲಿಕೆಯ ಆರೋಗ್ಯ ವಿಭಾಗ ಇದರ ನಿರ್ವಹಣೆ ಮಾಡಲಿದೆ ಎಂದು ಮೇಯರ್ ಸುನೀತಾ ಅಣ್ಣಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಗರದ ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸ್ ಮಾಡಲಾಗುತ್ತಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಸ ಸಂಗ್ರಹಣೆಯ ಎಲ್ಲಾ ಆಟೊ ಟಿಪ್ಪರ್‌ಗಳಲ್ಲಿ ಹಾಗೂ 5 ಖಾಸಗಿ ಆಟೊರಿಕ್ಷಾಗಳಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದುವರೆಗೂ ಪಾಲಿಕೆಯಿಂದ 32 ಮೈಕ್ರೊ ಕಂಟೈನ್‌ಮೆಂಟ್ ಜೋನ್‌ಗಳನ್ನು ಮಾಡಲಾಗಿದೆ. ಪ್ರಸ್ತುತ 30 ಸಕ್ರಿಯ ಕಂಟೈನ್‌ಮೆಂಟ್ ಜೋನ್‌ಗಳಿವೆ. ಸರ್ಕಾರದ ಮಾರ್ಗಸೂಚಿ ಅನುಷ್ಠಾನಗೊಳಿಸಲು ತಲಾ 6 ಅಧಿಕಾರಿಗಳು, ಸಿಬ್ಬಂದಿ ಒಳಗೊಂಡ 10 ತಂಡಗಳನ್ನು ರಚಿಸಲಾಗಿದೆ ಎಂದರು.

ADVERTISEMENT

ಮಾರ್ಗಸೂಚಿ ಉಲ್ಲಂಘಿಸಿದ 2,274 ಪ್ರಕರಣಗಳಲ್ಲಿ ₹ 5,89,750 ದಂಡ ವಿಧಿಸಲಾಗಿದೆ. 7 ಪ್ರಕರಣಗಳಿಗೆ ದೂರು ದಾಖಲಿಸಲಾಗಿದೆ. ಚೆಕ್‌ಪೋಸ್ಟ್ ನಿರ್ವಹಣೆಗಾಗಿ ಪಾಲಿಕೆಯ 8 ಸಿಬ್ಬಂದಿ ನಿಯೋಜಿಸಲಾಗಿದೆ. ಮೆಗ್ಗಾನ್‌ ಆಸ್ಪತ್ರೆಗೆ ಒಂದು ಮುಕ್ತಿ ವಾಹಿನಿ ವಾಹನ ಹಾಗೂ ಪಿಪಿಇ ಕಿಟ್‌ಗಳನ್ನು ನೀಡಲಾಗಿದೆ ಎಂದು ವಿವರ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರು ಮರಣ ಹೊಂದಿದರೆ ಅವರ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ನಿರ್ವಹಿಸಲು 6 ತಂಡ ರಚಿಸಲಾಗಿದೆ. ಆನ್‌ಲೈನ್ ಮೂಲಕ ಆಸ್ತಿ ತೆರಿಗೆಗೆ ಕಟ್ಟಬಹುದಾಗಿದೆ. ಜೂನ್ 30ರವರೆಗೆ ಆಸ್ತಿ ತೆರಿಗೆಯಲ್ಲಿ ಶೇ 5ರಷ್ಟು ರಿಯಾಯಿತಿ ನೀಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನವಿಲೆ ಧೀರರಾಜ್, ಸದಸ್ಯರಾದ ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ಎಸ್.ಜ್ಞಾನೇಶ್ವರ್, ಅನಿತಾ ರವಿಶಂಕರ್, ಆಯುಕ್ತ ಚಿದಾನಂದ ವಟಾರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.