ADVERTISEMENT

ಅನುಭವಿಸಿದಾಗ ಸಿಗುವುದು ಕಾವ್ಯ ರಸಗ್ರಹಣ: ಡಾ.ಕಬ್ಬಿನಾಲೆ ವಸಂತ್ ಭಾರದ್ವಾಜ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 11:53 IST
Last Updated 28 ಏಪ್ರಿಲ್ 2019, 11:53 IST
ತಾಲ್ಲೂಕಿನ ಹೊಸಹಳ್ಳಿಯಲ್ಲಿ ಭಾನುವಾರ ಮಾರ್ಕಂಡೇಯ ಅವಧಾನಿ ಸ್ಮರಣಾರ್ಥ ಆಯೋಜಿಸಿದ್ದ ಅಹೋರಾತ್ರಿ ಗಮಕ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಕಬ್ಬಿನಾಲೆ ವಸಂತ್ ಭಾರದ್ವಾಜ್ ಮಾತನಾಡಿದರು. 
ತಾಲ್ಲೂಕಿನ ಹೊಸಹಳ್ಳಿಯಲ್ಲಿ ಭಾನುವಾರ ಮಾರ್ಕಂಡೇಯ ಅವಧಾನಿ ಸ್ಮರಣಾರ್ಥ ಆಯೋಜಿಸಿದ್ದ ಅಹೋರಾತ್ರಿ ಗಮಕ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಕಬ್ಬಿನಾಲೆ ವಸಂತ್ ಭಾರದ್ವಾಜ್ ಮಾತನಾಡಿದರು.    

ಶಿವಮೊಗ್ಗ: ಪಠ್ಯದ ಉದ್ದೇಶಕ್ಕಾಗಿ ಕಾವ್ಯದ ಅಧ್ಯಯನ ನಡೆಸದೇ, ಅನುಭವಿಸಿ ಓದಿದಾಗ ಮಾತ್ರ ಕಾವ್ಯದ ರಸಗ್ರಹಣ ಸಾಧ್ಯ ಎಂದು ಗಮಕ ವಿಮರ್ಶಕ ಡಾ.ಕಬ್ಬಿನಾಲೆ ವಸಂತ್ ಭಾರದ್ವಾಜ್ ಕಿವಿಮಾತು ಹೇಳಿದರು.

ತಾಲ್ಲೂಕಿನ ಹೊಸಹಳ್ಳಿಯ ಗಮಕ ಭವನದಲ್ಲಿ ಭಾನುವಾರ ಮಾರ್ಕಂಡೇಯ ಅವಧಾನಿ ಸ್ಮರಣಾರ್ಥ ಗಮಕ ಕಲಾ ಪರಿಷತ್, ಕಾವ್ಯ ಗಾಯನ ಕಲಾಮಂದಿರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 5ನೇ ಅಹೋರಾತ್ರಿ ಗಮಕ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಕಾವ್ಯ ಪ್ರಕಾರದ ಗಂಭೀರ ಅಧ್ಯಯನ ಈಚೆಗೆ ಕಾಣುತ್ತಿಲ್ಲ. ಕಾವ್ಯದ ಅನುಭೂತಿ ಪಡೆಯಲು ಗಂಭೀರ ಅಧ್ಯಯನ ಅಗತ್ಯ.ಪಂಪ, ರನ್ನ, ರಾಘವಾಂಕ, ಕುಮಾರ ವ್ಯಾಸ, ಲಕ್ಷೀಶರಂತಹ ಕವಿಗಳ ಕಾವ್ಯದ ಸೊಗಸು ಆಸ್ವಾದಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ಕಾವ್ಯವೆಂದರೆ ಕಥೆ ಬರೆಯುವುದಲ್ಲ. ಕಥೆಯನ್ನು ಮೀರಿದ ದರ್ಶನ ಕಾವ್ಯಕ್ಕೆ ಇದೆ ಎಂದು ಬಣ್ಣಿಸಿದರು.

ADVERTISEMENT

ಗಮಕ ವ್ಯಾಖ್ಯಾನಕಾರ ಡಾ.ಎ.ವಿ.ಪ್ರಸನ್ನ ಮಾತನಾಡಿ, ಕವಿಯ ಬಗ್ಗೆ ಅಧ್ಯಯನ ಮಾಡುವ ಮೊದಲು ಆತನ ಬಗ್ಗೆ ವಿಶೇಷ ಪ್ರೀತಿ, ಗೌರವ, ಆಶ್ಚರ್ಯ ಇರಬೇಕು. ಕವಿಯನ್ನು ಬೇರೆ ದೃಷ್ಟಿಯಿಂದ ನೋಡಿದಾಗ ಆತನ ಕಾವ್ಯ ಸಂಪೂರ್ಣ ತೆರೆದುಕೊಳ್ಳಲು ಸಾಧ್ಯವಿಲ್ಲ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನೂ ಸಂಸ್ಕೃತಿಗೆ ತಕ್ಕಂತೆ ಬದಲಾಯಿಸುವುದು ತಪ್ಪಲ್ಲ. ಆದರೆ, ಕುಕವಿಗಳು ಮನಸ್ಸಿಗೆ ಬಂದಂತೆ ಮಹಾಕಾವ್ಯ ತಿರುಚುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಅಹೋರಾತ್ರಿ ಗಮಕದ ವೈವಿಧ್ಯಮಯ ವಾಚನ ಮತ್ತು ವ್ಯಾಖ್ಯಾನ ನಡೆಯಿತು. ಹೊಸಬರನ್ನು ಗಮಕದತ್ತ ಸೆಳೆಯುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು. ತಲಾ 20 ಗಮಕ ವಾಚನಕಾರರು ಹಾಗೂ ವ್ಯಾಖ್ಯಾನಕಾರು ಒಂದೇ ವೇದಿಕೆ ಮೂಲಕ ವಿಶೇಷತೆ ಮೆರೆದರು. ಇಸ್ರೊ ವಿಜ್ಞಾನಿ ಜಯಸಿಂಹ, ಎಂ.ಆರ್.ಸತ್ಯನಾರಾಯಣ, ರಾಜೀವಲೋಚನ, ಗೋಪಿನಾಥ್ ಶಾಸ್ತ್ರಿ ಅಭಿಪ್ರಾಯ ಮಂಡಿಸಿದರು.

ಗಮಕ ಕಲಾ ಪರಿಷತತ್‌ ಅಧ್ಯಕ್ಷ ಎಚ್.ಎಸ್.ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಚ್.ಆರ್.ಕೇಶವಮೂತಿ, ಕಾರ್ಯದರ್ಶಿ ಅನಂತ ನಾರಾಯಣ, ರಾಜರಾಮ್ ಮೂರ್ತಿ, ಎಸ್.ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.