ADVERTISEMENT

‘ಗಾಂಧಿವಾದಿಗಳ ಹೆಸರಲ್ಲಿ ಆದರ್ಶಗಳಿಗೆ ಧಕ್ಕೆ’

ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದಿಂದ ಗಾಂಧಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:42 IST
Last Updated 3 ಅಕ್ಟೋಬರ್ 2025, 5:42 IST
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಎನ್.ಎಲ್.ನಾಯಕ್‌ ಅವರಿಗೆ ‘ವರ್ಷದ ವ್ಯಕ್ತಿ ಪುರಸ್ಕಾರ’ ನೀಡಿ ಗೌರವಿಸಲಾಯಿತು
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಎನ್.ಎಲ್.ನಾಯಕ್‌ ಅವರಿಗೆ ‘ವರ್ಷದ ವ್ಯಕ್ತಿ ಪುರಸ್ಕಾರ’ ನೀಡಿ ಗೌರವಿಸಲಾಯಿತು   

ಶಿವಮೊಗ್ಗ: ‘ಅಧಿಕಾರದ ಆಸೆಗೆ ಆದರ್ಶಗಳನ್ನೇ ಗಾಳಿಗೆ ತೂರುತ್ತಿರುವ ಗಾಂಧಿವಾದಿಗಳು ಹೆಚ್ಚುತ್ತಿದ್ದಾರೆ. ‘ಗಾಂಧಿವಾದ’ ಎನ್ನುವುದು ಗಾಂಧಿಯ ರೀತಿಯೇ ಬಟ್ಟೆ ತೊಟ್ಟು ಬದುಕು ನಡೆಸುವುದಲ್ಲ. ಬದಲಿಗೆ ಅವರ ಆದರ್ಶಗಳು ರಕ್ತದ ಕಣ–ಕಣದಲ್ಲಿ ಬೆರೆತುಕೊಂಡಿರಬೇಕು’ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಹಾಗೂ ಪ್ರತಿಷ್ಠಾನದ 78ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಉದ್ದೇಶಪೂರ್ವಕವಾಗಿಯೇ ಕೆಲವರು ಗಾಂಧಿವಾದಿಗಳೆಂದು ಕರೆಸಿಕೊಳ್ಳುತ್ತಿದ್ದಾರೆ. ಗಾಂಧೀಜಿ ಮನಸ್ಸು ಮಾಡಿದ್ದರೆ ದೇಶದ ಉನ್ನತ ಹುದ್ದೆಗಳಿಗೆ ಏರಲು ಅವಕಾಶವಿತ್ತು. ಆದರೆ, ಅವರಿಗೆ ಅಧಿಕಾರವಲ್ಲ, ಆದರ್ಶ ಮುಖ್ಯವಾಗಿತ್ತು. ಗಾಂಧಿಯನ್ನು ಅಂತರಂಗದಿಂದ ಮೈಗೂಡಿಸಿಕೊಂಡರೆ ಮಾತ್ರ ಜಯಂತಿ ಆಚರಣೆಗೆ ಅರ್ಥ ಸಿಗಲಿದೆ ಎಂದರು.

ADVERTISEMENT

‘ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಗಾಂಧೀಜಿಯನ್ನು ದ್ವೇಷದ ಭಾವನೆಯಿಂದ ಕಾಣುತ್ತಾ, ಅವರ ಹತ್ಯೆಗೆ ಕಾರಣರಾದವರನ್ನು ಪೂಜನೀಯ ಭಾವದಿಂದ ಕಾಣಲಾಗುತ್ತಿದೆ. ರಾಜಕಾರಣ ಎಂಬುದು ಯಾವ ದಿಕ್ಕಿನಡೆ ಸಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಅವರ ತತ್ವವನ್ನೇ ತುಳಿದು ರಾಜಕೀಯ ಮಾಡಲಾಗುತ್ತಿದೆ. ಇದು ದೇಶದ ಭವಿಷ್ಯಕ್ಕೇ ಮಾರಕ’ ಎಂದು ಶಿವಮೊಗ್ಗ– ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಬೇಸರ ವ್ಯಕ್ತಪಡಿಸಿದರು. 

ಆದರ್ಶ ಪುರುಷರ ಜಯಂತಿಗಳಿಗೆ ಶಾಲಾ– ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸುವುದು ಸರಿಯಲ್ಲ. ಈ ದಿನದಂದು ಮಹನೀಯರ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿ ಅರಿವು ಮೂಡಿಸಬೇಕು. ಬಸವಣ್ಣ, ಕನಕದಾಸ, ವಾಲ್ಮಿಕಿ, ಅಂಬೇಡ್ಕರ್ ಸೇರಿದಂತೆ ಅನೇಕ ಆದರ್ಶ ವ್ಯಕ್ತಿಗಳನ್ನು ಒಂದೊಂದು ಜಾತಿಗಳಿಗೆ ಸೀಮಿತಗೊಳಿಸಲಾಗಿದೆ. ಇದು ಸರಿಯಲ್ಲ ಎಂದು ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ ಹೇಳಿದರು.

ಗಾಂಧಿ ಬಸಪ್ಪ ಮತ್ತು ಹಳದಮ್ಮರ ಕುರಿತ ಎಸ್.ಬಿ.ವಾಸುದೇವ ಅವರು ಬರೆದ ‘ನನ್ನ ಪ್ರೀತಿಯ ಅಪ್ಪ- ಅಮ್ಮ’ ಕೃತಿ ಬಿಡುಗಡೆಗೊಳಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ವೈದ್ಯರೂ ಆದ ಎನ್.ಎಲ್.ನಾಯಕ್‌ ಅವರಿಗೆ ‘ವರ್ಷದ ವ್ಯಕ್ತಿ ಪುರಸ್ಕಾರ’ ನೀಡಿ ಗೌರವಿಸಲಾಯಿತು. 

ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ.ವಾಸುದೇವ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರ್, ಅಶ್ವತ್ ನಾರಾಯಣ ಶೆಟ್ಟಿ, ಅಶೋಕ್ ಕುಮಾರ್, ಶ್ರೀನಿವಾಸನ್, ಸಂಧ್ಯಾರಾಣಿ, ಶೀಲಾ ಪ್ರಕಾಶ್, ಕೆ.ಸಿ.ಜಯಣ್ಣ, ಪುಷ್ಪಲತಾ ಮೋಹನ್, ಎಸ್.ಎಸ್.ಕೀರ್ತಿರಾಜ ಇದ್ದರು.  

ಪ್ರೇಮ ತತ್ವ ರೂಢಿಸಿಕೊಳ್ಳಿ

‘ಗಾಂಧಿ ತತ್ವವನ್ನು ಕೆಲವರು ಇಲ್ಲದಂತೆ ಮಾಡಲು ಹೊರಟಿದ್ದಾರೆ. ಸತ್ಯಶೋಧನೆ ಹಾಗೂ ಅಹಿಂಸೆಗೆ ಆತುಕೊಂಡಿರುವವರಿಗೆ ಗಾಂಧೀಜಿ ಅನಿವಾರ್ಯ’ ಎಂದು ಉಪನ್ಯಾಸಕಿ ಕೆ.ವಿ. ಜ್ಯೋತಿಕುಮಾರಿ ಅಭಿಪ್ರಾಯಪಟ್ಟರು. ‘ಗಾಂಧಿ ಬದುಕು ಮತ್ತು ಬೋಧನೆ ಬೇರೆ– ಬೇರೆ ಆಗಿರಲಿಲ್ಲ. ಗಾಂಧಿಯ ಪ್ರೇಮ ತತ್ವವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಅವರನ್ನು ಅರಿಯಲು ಆಳಕ್ಕೆ ಇಳಿದು ಅಧ್ಯಯನ ಮಾಡಬೇಕು. ಮೇಲ್ನೋಟದಲ್ಲಿ ಗಾಂಧಿ ಸಿಗುವುದಿಲ್ಲ. ಗಾಂಧಿಯ ನಿಸರ್ಗ ಪೂರಕ ಜೀವನ ಎಲ್ಲರಿಗೂ ಮಾದರಿ. ಸ್ವರಾಜ್ಯ ಎಂಬುದು ಸ್ವಾತಂತ್ರ್ಯ ಅಲ್ಲ ಸ್ವಾವಲಂಬನೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.