ಶಿವಮೊಗ್ಗ: ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ನುಡಿದಂತೆ ನಡೆದ ಲಾಲ್ ಬಹದ್ದೂರು ಶಾಸ್ತ್ರೀ ಅವರ ಅಪ್ರತಿಮ ದೇಶಪ್ರೇಮ, ನಿಷ್ಠೆ ಮತ್ತು ಪ್ರಾಮಾಣಿಕತೆ ಈ ದೇಶದ ಭವ್ಯ ಪರಂಪರೆಯ ಜೀವ- ಜೀವಾಳ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ 156ನೇ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಹಾತ್ಮ ಗಾಂಧಿ ಜಗತ್ತು ಕಂಡ ಶ್ರೇಷ್ಠ ಪುರುಷ. ಸಾಮಾನ್ಯ ವ್ಯಕ್ತಿಯಾಗಿ ಜನಿಸಿ ನಂತರ ಜಗತ್ತೇ ಮೆಚ್ಚುವಂತಹ ನಾಯಕನಾಗಿ ಬೆಳೆದವರು. ಮಹಾತ್ಮ ಗಾಂಧಿ ಬದುಕಿನದ್ದಕ್ಕೂ ಸತ್ಯ, ಧರ್ಮವನ್ನು ಸಾರುತ್ತಾ ಬಂದಿದ್ದಲ್ಲದೆ ರಾಮರಾಜ್ಯದ ಸುಂದರ ಕನಸನ್ನು ಕಂಡವರು. ದೇಶವು ಏಕತೆ, ಸಮಗ್ರತೆ ಹಾಗೂ ಒಗ್ಗಟ್ಟಿನಿಂದ ಕೂಡಿರಬೇಕೆಂದು ಆಶಿಸಿದವರು. ಸತ್ಯ ಮೇವ ಜಯತೆಯ ಉದಾತ್ತ ಆಶಯವನ್ನು ಅಳವಡಿಸಿಕೊಂಡಿದ್ದ ಅವರು ರಾಜಕಾರಣಿಯಾಗದೇ ಮಹಾತ್ಮರಾಗಿ ಉಳಿದರು’ ಎಂದು ಸ್ಮರಿಸಿದರು.
ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಪ್ರಾಮಾಣಿಕತೆಯಿಂದ ಬದುಕು ನಡೆಸಿದರು. ರೈತರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಮೊಳಗಿಸುತ್ತಾ ಈ ದೇಶದ ರೈತರ ಪರವಾಗಿ ನಿಂತಿದ್ದರು ಎಂದರು.
‘ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಎಲ್ಲರೂ ಕ್ರಾಂತಿಯ ದಾರಿ ಹಿಡಿದರೆ, ಗಾಂಧಿ ಮಾತ್ರ ಅಹಿಂಸಾತ್ಮಕ ಮಾರ್ಗ ತುಳಿದು ಹೋರಾಟಗಾರರಿಗೆ ಮಾದರಿಯಾದರು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಈ ವೇಳೆ ಸರ್ವಧರ್ಮಗಳ ಗುರುಗಳು ಧರ್ಮ ಬೋಧನೆ ಮಾಡಿದರು. ಗಾಂಧಿ ಜಯಂತಿಯ ಅಂಗವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಪ್ರಮಾಣ ಪತ್ರ ವಿತರಿಸಲಾಯಿತು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಕೈಮಗ್ಗ ಮತ್ತು ಜವಳಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಜಿ.ಪಂ ಸಿಇಒ ಹೇಮಂತ್, ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಎಡಿಸಿ ವಿ.ಅಭಿಷೇಕ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಮೋಹನ್‌ಕುಮಾರ್, ವಾರ್ತಾ ಇಲಾಖೆಯ ಆರ್.ಮಾರುತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.