ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ–ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ವಿಸರ್ಜನೆ ಪ್ರಯುಕ್ತ ಪ್ರಮುಖ ವೃತ್ತಗಳು ಕೇಸರಿಮಯವಾಗಿವೆ
ಭದ್ರಾವತಿ: ನಗರದ ಹೊಸಮನೆ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ 53ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನೆ ಸೆ. 4ರಂದು (ಗುರುವಾರ) ನಡೆಯಲಿದೆ.
ಈ ಬಾರಿ ಶ್ವೇತ ವರ್ಣದ ಅರಳಿದ ಕಮಲದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಳೇನಗರದ ಶಿಲ್ಪ ಕಲಾವಿದರಾದ ರಂಗಪ್ಪ ಕುಟುಂಬದವರು ಪ್ರತಿ ವರ್ಷದಂತೆ ಈ ಬಾರಿಯೂ ಮೂರ್ತಿ ತಯಾರಿಸಿದ್ದು, ಸುಮಾರು 6 ಅಡಿ ಎತ್ತರವಿದ್ದು, ಹಲವು ವಿಶಿಷ್ಟತೆಗಳಿಂದ ಕೂಡಿದೆ.
ಪ್ರತಿವರ್ಷ ವೈಭವಯುತವಾಗಿ ವಿಸರ್ಜನಾ ಮೆರವಣಿಗೆ ನಡೆಯುತ್ತಿದ್ದು, ಈ ಬಾರಿಯೂ ಉತ್ಸವ ಮೆರವಣಿಗೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಪ್ರಮುಖ ವೃತ್ತಗಳಲ್ಲಿ ನಿರ್ಮಿಸಿರುವ ದ್ವಾರಬಾಗಿಲುಗಳ ಬಳಿ ಫ್ಲೆಕ್ಸ್, ಕೇಸರಿ ಧ್ವಜ ರಾರಾಜಿಸುತ್ತಿವೆ. ಹೊಸಮನೆ ಮುಖ್ಯ ರಸ್ತೆ, ರಾಜ್‌ಕುಮಾರ್ ರಸ್ತೆ, ಬಿ.ಎಚ್. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಕೇಸರಿಮಯವಾಗಿ ಕಂಗೊಳಿಸುತ್ತಿವೆ.
ಅಂಗಡಿಗಳ ಬಳಿ ಅನ್ನಸಂತರ್ಪಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಲಾಡು, ಮಜ್ಜಿಗೆ, ಪಾನಕ ವಿತರಣೆಯೂ ನಡೆಯಲಿದೆ. ಹಲವು ಸಂಘಟನೆಗಳಿಂದ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿದ್ದು, ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಒಳ ರಸ್ತೆಗಳಿಗೆ ಸಂಪರ್ಕ ಬ್ಯಾರಿಕೇಡ್ ಅಳವಡಿಸಲಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಉತ್ಸವ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ಗೊಂಬೆ ನೃತ್ಯ, ವೀರಗಾಸೆ, ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ. ಸಾವಿರಾರು ಭಕ್ತರು ಕಲಾತಂಡಗಳೊಂದಿಗೆ ಹೆಜ್ಜೆ ಹಾಕುವ ನಿರೀಕ್ಷೆ ಇದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಎಸ್ಪಿ–3, ಎಎಸ್‌ಪಿ–5, ಡಿವೈಎಸ್‌ಪಿ–17, ಸಿಪಿಐ– 34, ಪಿಎಸ್‌ಐ– 23, ಕಾನ್‌ಸ್ಟೆಬಲ್–1,750, ಗೃಹರಕ್ಷಕದಳ–220, ಕೆಎಸ್‌ಆರ್‌ಪಿ (ಮೀಸಲು ಪಡೆ) ತುಕಡಿ– 8, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಆರ್)–8 ತುಕಡಿ, ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್)–1 ತುಕಡಿ, ವಿಶೇಷ ಕಾರ್ಯಪಡೆ (ಎಸ್‌ಎಎಫ್)–1 ತುಕಡಿ ಹಾಗೂ 100 ದ್ರೋಣ್ ನಿರ್ವಾಹಕರು ಮತ್ತು ವಿಡಿಯೊ ಚಿತ್ರೀಕರಣಕ್ಕೆ 50 ವಿಡಿಯೊಗ್ರಾಫರ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಹಿಂದೂ ಮಹಾಸಭಾ: ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಎಲ್ಲಾ ಧರ್ಮದವರು ಶಾಂತಿ ಸೌರ್ಹಾದಯುತವಾಗಿ ವರ್ತಿಸುವ ಮೂಲಕ ವಿಸರ್ಜನಾ ಪೂರ್ವ ಮೆರವಣಿಗೆ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.