ADVERTISEMENT

ಗಣೇಶ ಹಬ್ಬದ ಸಂಭ್ರಮಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 3:55 IST
Last Updated 9 ಸೆಪ್ಟೆಂಬರ್ 2021, 3:55 IST
ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಮಹಿಳೆಯೊಬ್ಬರು ಗೌರಿ ಮೂರ್ತಿ ಖರೀದಿಸಿದರು
ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಮಹಿಳೆಯೊಬ್ಬರು ಗೌರಿ ಮೂರ್ತಿ ಖರೀದಿಸಿದರು   

ಶಿವಮೊಗ್ಗ: ವಿಘ್ನ ನಿವಾರಕರನ ಹಬ್ಬಕ್ಕೆ ಇದ್ದ ವಿಘ್ನ ದೂರಾಗಿದ್ದು, ಸರ್ಕಾರ ನಿಬಂಧನೆಗಳೊಂದಿಗೆ ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡಿರುವ ಕಾರಣ ನಗರದೆಲ್ಲೆಡೆ ಸಂಭ್ರಮದ ಸಿದ್ಧತೆ ನಡೆದಿದೆ. ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಗಣೇಶನ ಆಗಮನಕ್ಕೆ ತಯಾರಿ ಜೋರಾಗಿಯೇ ನಡೆದಿದೆ.

ಕೊರೊನಾ ಕಾರಣ ಕಳೆದ ಬಾರಿ ಒಂದೇ ದಿನಕ್ಕೆ ಹಬ್ಬ ಸೀಮಿತವಾಗಿತ್ತು. ಆದರೆ, ಈ ವರ್ಷ ಸರ್ಕಾರ ಗಣೇಶೋತ್ಸವಕ್ಕೆ ಒಪ್ಪಿಗೆ ನೀಡಿರುವುದರಿಂದ ಹಬ್ಬಕ್ಕೆ ಮೆರಗು ಬಂದಿದೆ.

ಮಾರುಕಟ್ಟೆಯಲ್ಲಿ ಜನಸಂದಣಿ: ಹಬ್ಬದ ಕಾರಣ ಮಾರುಕಟ್ಟೆಯಲ್ಲಿ ಜನಸಂದಣಿ ಎಂದಿಗಿಂತ ಹೆಚ್ಚಾಗಿತ್ತು. ಕೊರೊನಾ ಆತಂಕ ಇದ್ದರೂ ಜನರು ಹಬ್ಬಕ್ಕೆ ಬೇಕಾದ ಸಾಮಗ್ರಿ ಕೊಂಡುಕೊಳ್ಳಲು ಮಾರುಕಟ್ಟೆ ಯತ್ತ ಮುಖ ಮಾಡಿದ್ದರು. ನಗರದ ಪ್ರಮುಖ ವ್ಯಾಪಾರ ಸ್ಥಳಗಳಾದ ಗಾಂಧಿ ಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಬಿ.ಎಚ್.ರಸ್ತೆಯಲ್ಲಿ ಜನಸಂಚಾರ ಅಧಿಕವಾಗಿತ್ತು. ಹೂ, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ದಿನಸಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡು ಬಂತು.

ADVERTISEMENT

ಈ ಬಾರಿ ಹಬ್ಬದ ಕಾರಣ ತರಕಾರಿ, ಹಣ್ಣು, ಹೂಗಳ ಬೆಲೆಯಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲ. ಹಬ್ಬದ ಕಾರಣ ರೈಲು, ಕೆಎಸ್ಆರ್‌ಟಿಸಿ ಬಸ್
ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಪೊಲೀಸ್ ಇಲಾಖೆಯಿಂದ ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆ ಒದಗಿಸಲಾಗಿದೆ.

ಚಿಕ್ಕ ಗಣಪನಿಗೆ ಬೇಡಿಕೆ: ‘ಸರ್ಕಾರದ ಆದೇಶದಂತೆ ಈ ಬಾರಿ ಚಿಕ್ಕ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕಿದೆ. ಅಲ್ಲದೇ, ವಾರ್ಡ್‌ಗೊಂದು ಗಣಪನ ಪ್ರತಿಷ್ಠಾಪನೆ ಮಾಡುವಂತೆ ಸೂಚಿಸಿದೆ. ಈ ಬಗ್ಗೆ ಹಲವು ಸಂಘಟನೆಗಳು ಸರ್ಕಾರದ ವಿರುದ್ಧ ಅಪಸ್ವರ ಎತ್ತಿವೆ. ಮಾರುಕಟ್ಟೆಯಲ್ಲಿ ಎರಡು
ಅಡಿಯಿಂದ ನಾಲ್ಕು ಅಡಿಯೊಳಗಿನ ಮೂರ್ತಿಗಳಿಗೆ ಬೇಡಿಕೆ ಇದೆ’ ಎನ್ನುತ್ತಾರೆ ಮೂರ್ತಿ ಮಾರಾಟಗಾರ ಸುರೇಶ್‌.

ನಗರದಲ್ಲಿ ಹಬ್ಬದ ಮುನ್ನಾ ದಿನವಾದ ಬುಧವಾರವೇ ಗೌರಿ ಮೂರ್ತಿಯನ್ನು ಖರೀದಿಸುತ್ತಿದ್ದುದು ಕಂಡು ಬಂತು. ಚಿಕ್ಕ ಮೂರ್ತಿಯ ಬೆಲೆ ₹ 250ರಿಂದ 350ವರೆಗೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.