ADVERTISEMENT

ಶಿವಮೊಗ್ಗ: ಮಲೆನಾಡಿನಲ್ಲಿ ಗೌರಿ ಪೂಜೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 4:37 IST
Last Updated 27 ಆಗಸ್ಟ್ 2025, 4:37 IST
ಶಿವಮೊಗ್ಗ ನಗರದ ಬಿ.ಎಚ್.ರಸ್ತೆಯ ಮೈಲಾರೇಶ್ವರ ದೇವಸ್ಥಾನದಲ್ಲಿ ಗೌರಿಯನ್ನು ಕೂರಿಸಿರುವುದು
ಶಿವಮೊಗ್ಗ ನಗರದ ಬಿ.ಎಚ್.ರಸ್ತೆಯ ಮೈಲಾರೇಶ್ವರ ದೇವಸ್ಥಾನದಲ್ಲಿ ಗೌರಿಯನ್ನು ಕೂರಿಸಿರುವುದು   

ಶಿವಮೊಗ್ಗ: ‘ಜಿಲ್ಲೆಯಾದ್ಯಂತ ಗೌರಿ– ಗಣೇಶ ಹಬ್ಬಕ್ಕೆ ಮಂಗಳವಾರ ಸಂಭ್ರಮದಿಂದ ಚಾಲನೆ ನೀಡಲಾಯಿತು. 

ಗೌರಿ ಹಬ್ಬದ ಅಂಗವಾಗಿ ಮುಂಜಾನೆಯೇ ಮಡಿಯುಟ್ಟ ಮಹಿಳೆಯರು, ಬಾವಿ, ನದಿ, ಕೊಳವೆ ಬಾವಿಗಳ ಬಳಿಗೆ ಸಾಮೂಹಿಕವಾಗಿ ತೆರಳಿ, ಗಂಗೆ ಪೂಜೆ ನಡೆಸಿದರು.

ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್, ರವೀಂದ್ರ ನಗರ ಗಣಪತಿ ದೇವಾಲಯ, ಬಿ.ಎಚ್.ರಸ್ತೆಯ ಮೈಲಾರೇಶ್ವರ ದೇವಸ್ಥಾನ, ಬಸವೇಶ್ವರ ದೇವಾಲಯ ಸೇರಿ ಪ್ರಮುಖ ದೇವಾಲಯಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಲಾಗಿದೆ. ಬೆಳಿಗ್ಗೆಯೇ ಶುಭ ಮುಹೂರ್ತದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ, ಮುತ್ತೈದೆಯರು ಕುಟುಂಬ ಸಮೇತ ಬಂದು ತಾಯಿಗೆ ಬಾಗಿನ ನೀಡಿ ಕುಟುಂಬದ ಸದಸ್ಯರ ಹೆಸರಿನಲ್ಲಿ ಪೂಜೆ ನೆರವೇರಿಸಿದರು.

ADVERTISEMENT

ಹಬ್ಬದ ಅಂಗವಾಗಿ ಮುಂಜಾನೆಯಿಂದಲೇ ಭಕ್ತರು ದೇವಾಲಯಗಳಿಗೆ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚಕ್ಕುಲಿ, ಎಳ್ಳುಂಡೆ, ಕರ್ಜಿಕಾಯಿ ಸೇರಿ ವಿವಿಧ ಸಿಹಿ ಭಕ್ಷ್ಯಗಳನ್ನು ತಯಾರಿಸಿ ಗೌರಿ ದೇವಿಗೆ ನೈವೇದ್ಯ ನೀಡಿ ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸಿದರು.

ಗಣೇಶ ಹಬ್ಬದ ಪ್ರಯುಕ್ತ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಸಾರಿಗೆ ಇಲಾಖೆಯು ಹೆಚ್ಚುವರಿ ಬಸ್‌ಗಳನ್ನು ಸಜ್ಜುಗೊಳಿಸಿದೆ. ಪೊಲೀಸ್ ಇಲಾಖೆಯಿಂದ ಮಾರುಕಟ್ಟೆ, ದೇವಾಲಯ ಮತ್ತು ಸಾರಿಗೆ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಮಾರಾಟಕ್ಕೆ ಇರಿಸಿದ ಗಣೇಶ ವಿಗ್ರಹಗಳನ್ನು ಗ್ರಾಹಕರು ಖರೀದಿಸಿದರು
ಶಿವಮೊಗ್ಗ ಸೈನ್ಸ್ ಮೈದಾನದಿಂದ ಗಣೇಶ ಪ್ರತಿಷ್ಠಾಪನೆಗೆ ಮಕ್ಕಳು ವಿಗ್ರಹ ಕೊಂಡೊಯ್ಯುವ ದೃಶ್ಯ

ಮನೆ ತುಂಬಿದ ಗೌರಿ:

ಮಲೆನಾಡಿನ ಸಾಗರ ಸೊರಬ ಹಾಗೂ ಹೊಸನಗರ ಭಾಗದಲ್ಲಿ ಗೌರಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು ಸಂಜೆಯ ಹೊತ್ತಿಗೆ ಗೌರಿಯನ್ನು ಬರಮಾಡಿಕೊಳ್ಳುವ ವಾಡಿಕೆ ಇದೆ. ಹೊಸ ನೀರಿನಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಕಂಕಣ ಕಟ್ಟಿಕೊಂಡು ಮಹಿಳೆಯರಿಗೆ ಬಾಗಿನ ಕೊಟ್ಟು ಗೌರಿಯನ್ನು ಮನೆ ತುಂಬಿಸಿಕೊಂಡರು. ಮನೆಗೆ ಬಂದ ಗೌರಿಗೆ ಮನೆ ಮಂದಿ ಆರತಿ ಬೆಳಗಿ ಒಳಗೆ ಕರೆದುಕೊಂಡು ಪೂಜೆ ಸಲ್ಲಿಸಿದರು. ಕೆಲವರು ಮೂರು ದಿನ ಮತ್ತೆ ಕೆಲವರು ಐದು ದಿನ ಗೌರಿ ಹಬ್ಬ ಆಚರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.