ADVERTISEMENT

ಶಿವಮೊಗ್ಗ: ಗಣಪತಿ ಮೆರವಣಿಗೆಯಲ್ಲಿ ಗೋಡ್ಸೆ ಫೋಟೊ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 13:21 IST
Last Updated 9 ಸೆಪ್ಟೆಂಬರ್ 2022, 13:21 IST
ಶಿವಮೊಗ್ಗ: ಗಣಪತಿ ಮೆರವಣಿಗೆಯಲ್ಲಿ ಗೋಡ್ಸೆ ಫೋಟೊ ಪ್ರದರ್ಶನ
ಶಿವಮೊಗ್ಗ: ಗಣಪತಿ ಮೆರವಣಿಗೆಯಲ್ಲಿ ಗೋಡ್ಸೆ ಫೋಟೊ ಪ್ರದರ್ಶನ   

ಶಿವಮೊಗ್ಗ: ಇಲ್ಲಿನ ಹಿಂದೂ ಮಹಾಸಭಾದಿಂದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವದ ವೇಳೆ ಶುಕ್ರವಾರ ಕೆಲವರು ನಾಥೂರಾಮ್ ಗೋಡ್ಸೆ ಭಾವಚಿತ್ರ ಪ್ರದರ್ಶಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ವೇಳೆ ವೀರ ಸಾವರ್ಕರ್, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್ ಜೊತೆಗೆ ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಇತ್ತೀಚೆಗೆ ಕೊಲೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಹಾಗೂ ನಾಥೂರಾಮ್ ಗೋಡ್ಸೆಯ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು.

ಗಣಪತಿಯ ರಾಜಬೀದಿ ಉತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಅಮೀರ್‌ಅಹಮದ್ ವೃತ್ತದಲ್ಲಿ ವೀರಸಾವರ್ಕರ್ ಹೆಸರಿನಲ್ಲಿ ಬೃಹತ್ ಮಹಾದ್ವಾರ ನಿರ್ಮಿಸಲಾಗಿತ್ತು. ವಿಶೇಷವೆಂದರೆ ಕೆಲವು ದಿನಗಳ ಹಿಂದಷ್ಟೇ ಇಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಮೆರವಣಿಗೆಯಲ್ಲಿ ಸಾಗಿ ಬಂದ ಗಣಪತಿ ಮೂರ್ತಿ ಹಿಂಭಾಗದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅಳವಡಿಸಲಾಗಿತ್ತು. ಅಮೀರ್ ಅಹಮದ್ ವೃತ್ತ ಹಾಗೂ ಬಸ್ ನಿಲ್ದಾಣದ ಎದುರು ಅಶೋಕ ಲಾಂಛನದ ಮೇಲೆ ಕೇಸರಿ ಧ್ವಜಗಳು ಹಾರಾಡಿದವು.

ADVERTISEMENT

ಮೆರವಣಿಗೆಯಲ್ಲಿ ಡಿಜೆ ಹಾಕಲು ಜಿಲ್ಲಾಡಳಿತ ಮೊದಲು ಅವಕಾಶ ನಿರಾಕರಿಸಿತ್ತು. ನಂತರ ಸಂಘಟಕರ ಒತ್ತಡಕ್ಕೆ ಮಣಿದು ಗೋಪಿ ವೃತ್ತದಲ್ಲಿ ಡಿಜೆಗೆ ಅವಕಾಶ ಕಲ್ಪಿಸಲಾಯಿತು. ಭಾರತ್‌ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡವರನ್ನು ಶಾಸಕ ಕೆ.ಎಸ್.ಈಶ್ವರಪ್ಪ ಹುರಿದುಂಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.