ADVERTISEMENT

ಗೋಪಾಲಗೌಡರಿಂದ ಕಾಗೋಡು ಚಳವಳಿಗೆ ತಾತ್ವಿಕ ನೆಲೆಗಟ್ಟು: ಬಿ.ಆರ್. ಜಯಂತ್

ಎಂ..ರಾಘವೇಂದ್ರ
Published 28 ಸೆಪ್ಟೆಂಬರ್ 2024, 15:40 IST
Last Updated 28 ಸೆಪ್ಟೆಂಬರ್ 2024, 15:40 IST
ಸಾಗರ ತಾಲ್ಲೂಕಿನ ತುಮರಿಯಲ್ಲಿ ಶನಿವಾರ ನಡೆದ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ವಿಚಾರ ಸಂಕಿರಣದಲ್ಲಿ ಹಿರಿಯ ಮುಖಂಡ ಬಿ.ಆರ್.ಜಯಂತ್ ಮಾತನಾಡಿದರು
ಸಾಗರ ತಾಲ್ಲೂಕಿನ ತುಮರಿಯಲ್ಲಿ ಶನಿವಾರ ನಡೆದ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ವಿಚಾರ ಸಂಕಿರಣದಲ್ಲಿ ಹಿರಿಯ ಮುಖಂಡ ಬಿ.ಆರ್.ಜಯಂತ್ ಮಾತನಾಡಿದರು   

ಸಾಗರ: ಶಾಂತವೇರಿ ಗೋಪಾಲಗೌಡರು ಹಾಗೂ ಇತರ ಸಮಾಜವಾದಿಗಳಿಂದ ತಾಲ್ಲೂಕಿನಲ್ಲಿ ನಡೆದ ಕಾಗೋಡು ಚಳವಳಿಗೆ ತಾತ್ವಿಕ ನೆಲೆಗಟ್ಟು ಒದಗಿತ್ತು ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದು ಹಿರಿಯ ಮುಖಂಡ ಬಿ.ಆರ್. ಜಯಂತ್ ಹೇಳಿದರು.

ತಾಲ್ಲೂಕಿನ ತುಮರಿ ಗ್ರಾಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಅಭಿವ್ಯಕ್ತಿ ಬಳಗ ಶನಿವಾರ ಏರ್ಪಡಿಸಿದ್ದ ಹ.ಮ. ಭಟ್ಟ ನೆನಪಿನ ಹಬ್ಬದಲ್ಲಿ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ವಿಚಾರಸಂಕಿರಣದಲ್ಲಿ ‘ಶಾಂತವೇರಿ ಗೋಪಾಲಗೌಡ: ಸಮಗ್ರ ವ್ಯಕ್ತಿಚಿತ್ರ’ ಕುರಿತು ಅವರು ಮಾತನಾಡಿದರು.

ಗೋಪಾಲಗೌಡರು ಹಾಗೂ ಇತರ ಸಮಾಜವಾದಿಗಳು ಕಾಗೋಡು ಸತ್ಯಾಗ್ರಹಕ್ಕೆ ಪ್ರವೇಶಿಸಿದ ಕಾರಣಕ್ಕೆ ಆ ಚಳವಳಿಗೆ ರಾಷ್ಟ್ರವ್ಯಾಪಿ ಮನ್ನಣೆ ದೊರೆಯಿತು. ಲೋಹಿಯಾರಂತಹ ಹಿರಿಯ ನಾಯಕರು ಇಲ್ಲಿಗೆ ಬಂದು ಚಳವಳಿಯಲ್ಲಿ ಭಾಗವಹಿಸಲು ಸಾಧ್ಯವಾಗಿದ್ದು ಕೂಡ ಗೋಪಾಲಗೌಡರಿಂದ ಎಂದರು.

ADVERTISEMENT

ಗೋಪಾಲಗೌಡರಿಗೆ ಜನರ ಪ್ರೀತಿ, ಸಮಾನತೆಯ ಸಿದ್ಧಾಂತವೇ ರಾಜಕಾರಣದಲ್ಲಿ ‘ಬಂಡವಾಳ’ ಆಗಿತ್ತು. ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಜನರು ಹಣದ ಜೊತೆಗೆ ಮತವನ್ನು ನೀಡಿದ್ದರು. ಅಂತಹ ರಾಜಕಾರಣವನ್ನು ಇಂದಿನ ಸನ್ನಿವೇಶದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ತಮ್ಮ ವೈಯುಕ್ತಿಕ ಬದುಕನ್ನು ಕಠಿಣ ಪರಿಸ್ಥಿತಿಗೆ ಒಡ್ಡಿಕೊಂಡು ಜನಪರವಾದ ರಾಜಕಾರಣ ಮಾಡಿದ ಹೆಗ್ಗಳಿಕೆ ಗೋಪಾಲಗೌಡರದ್ದು. ಸಾಹಿತ್ಯ, ಸಂಸ್ಕೃತಿ, ಕಲೆಗಳ ಒಡನಾಟ ಅವರಿಗಿದ್ದ ಕಾರಣ ಅಂತಃಕರಣದ ಸಂವೇದನೆ ಜಡ್ಡಾಗದ ಸೃಜನಶೀಲ ವ್ಯಕ್ತಿತ್ವವನ್ನು ಅವರು ರೂಪಿಸಿಕೊಂಡಿದ್ದರು ಎಂದು ವಿಶ್ಲೇಷಿಸಿದರು.

‘ಗೋಪಾಲಗೌಡರು ಪ್ರತಿನಿಧಿಸುತ್ತಿದ್ದ ಮೌಲ್ಯಗಳಿಗೆ ತದ್ವಿರುದ್ದವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಗಾಂಧಿವಾದದ ಸ್ಥಾನದಲ್ಲಿ ಕೋಮುವಾದ ರಾರಾಜಿಸುತ್ತಿದೆ. ಸಾಂವಿಧಾನಿಕ ಮೌಲ್ಯಗಳಿಗೆ ಅಪಚಾರ ಎಸಗುತ್ತ ವ್ಯಾಪಕ ಭ್ರಷ್ಟಾಚಾರ ಮಾಡುವ ರಾಜಕಾರಣವೇ ಮುನ್ನಲೆಗೆ ಬಂದಿದೆ. ಗೋಪಾಲಗೌಡರು ಪ್ರತಿಪಾದಿಸಿದ ವಿಚಾರದ ಕಿಡಿಯನ್ನು ಸಮಾಜದಲ್ಲಿ ಜಾಗೃತಗೊಳಿಸುವ ತುರ್ತು ಎದುರಾಗಿದೆ’ ಎಂದರು.

‘ನನ್ನ ಗ್ರಹಿಕೆಯಲ್ಲಿ ಗೋಪಾಲಗೌಡ’ ಕುರಿತು ಮಾತನಾಡಿದ ಮಾಜಿ ಶಾಸಕ ಮಹಿಮ ಪಟೇಲ್, ‘ಸಮಾನತೆಯೇ ಸಮಾಜವಾದದ ತಿರುಳು ಎಂಬುದರಲ್ಲಿ ಗೋಪಾಲಗೌಡರಿಗೆ ಗಾಢವಾದ ನಂಬಿಕೆ ಇತ್ತು. ಈ ಕಾರಣಕ್ಕಾಗಿಯೇ ಗೇಣಿದಾರರಿಗೆ ಭೂಮಿಯ ಹಕ್ಕು ದೊರಕಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು. 50-70ರ ದಶಕದ ಕರ್ನಾಟಕದ ಬಹುತೇಕ ರಾಜಕಾರಣಿಗಳ ವ್ಯಕ್ತಿತ್ವದ ಮೇಲೆ ಗೋಪಾಲಗೌಡರ ಪ್ರಭಾವ ಇತ್ತು’ ಎಂದು ಹೇಳಿದರು.

‘ಸಕ್ರಿಯ ರಾಜಕಾರಣದಲ್ಲಿದ್ದು ಗೋಪಾಲಗೌಡರು ಶಾಂತ ಮನಸ್ಥಿತಿಯನ್ನು ಹೊಂದಿದ್ದರು. ಆದರೆ ಇಂದಿನ ಬಹುತೇಕ ರಾಜಕಾರಣಿಗಳಿಗೆ ಅಂತಹ ಮನಸ್ಥಿತಿಯೇ ಇಲ್ಲವಾಗಿದೆ. ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ, ಆಡಳಿತ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದಾಗ ಮಾತ್ರ ಗೋಪಾಲಗೌಡರ ಆಶಯಗಳನ್ನು ಸಾಕಾರಗೊಳಿಸಬಹುದು’ ಎಂದರು.

ಮಮತಾ ಅರಸಿಕೆರೆ ಗೋಷ್ಠಿಯನ್ನು ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.