ADVERTISEMENT

ಗೋಪಾಲಗೌಡ; ಸಮಾಜವಾದಿ ಚಳವಳಿಯ ಸಾಕ್ಷಿಪ್ರಜ್ಞೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 13:46 IST
Last Updated 18 ಜನವರಿ 2019, 13:46 IST
ಶಾಂತವೇರಿ ಗೋಪಾಲಗೌಡ
ಶಾಂತವೇರಿ ಗೋಪಾಲಗೌಡ   

ಶಿವಮೊಗ್ಗ: ಹದಿಹರೆಯದಲ್ಲೇ ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿ, ಸ್ವಾತಂತ್ರ್ಯೋತ್ತರ ರಾಜಕಾರಣದಲ್ಲಿ ಕನ್ನಡನಾಡಿನ ಜವಾಬ್ದಾರಿಯುತ ರಾಜಕೀಯ ನಾಯಕರಾಗಿ ರೂಪುಗೊಂಡ ಮಹತ್ತರ ವ್ಯಕ್ತಿಗಳಲ್ಲಿ ಶಾಂತವೇರಿ ಗೋಪಾಲಗೌಡರೂ ಒಬ್ಬರು.

ತೀರ್ಥಹಳ್ಳಿ ತಾಲೂಕಿನ ಅರಗ ಗ್ರಾಮದಲ್ಲಿ ಹುಟ್ಟಿದ ಗೋಪಾಲಗೌಡರು ಸ್ವಾತಂತ್ರ್ಯೋತ್ತರದ ಮೊದಲ ಎರಡು ದಶಕಗಳು ಮೈಸೂರು ರಾಜ್ಯದ ರಾಜಕಾರಣಕ್ಕೆ ಸಮಾಜವಾದಿ ಆಯಾಮವನ್ನು ಕೊಟ್ಟರು. ಮತದಾರರಿಂದಲೇ ಚುನಾವಣಾ ರಾಜಕಾರಣವನ್ನು ರೂಪಿಸಲೆತ್ನಿಸಿದರು. ಅಧಿಕಾರಸ್ಥರ ಕಣ್ಗಾವಲಾಗಿ, ಜನತೆಯ ನಾಯಕರಾಗಿ ಬೆಳೆದ ಗೋಪಾಲಗೌಡರು ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದ ಆದರ್ಶ ಮಾದರಿಯೊಂದನ್ನು ಸೃಷ್ಟಿಸಲೆತ್ನಿಸಿದರು.

ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲೇ ಸಮಾಜವಾದಿ ವಿಚಾರಧಾರೆಯತ್ತ ಆಕರ್ಷಿತರಾಗಿದ್ದ ಗೌಡರು ಕ್ರಮೇಣ ರಾಮಮನೋಹರ ಲೋಹಿಯಾ ಅವರ ಹಾದಿಯಲ್ಲಿ ಹೊರಟರು. ಕರ್ನಾಟಕದಲ್ಲಿ ಸಮಾಜವಾದಿ ಚಿಂತನೆ, ಹೋರಾಟ ಹಾಗೂ ಸಮಾಜವಾದಿ ರಾಜಕಾರಣವನ್ನು ಹಬ್ಬಿಸಿದರು. ಗಣಪತಿಯಪ್ಪನವರು ಮುನ್ನಡೆಸಿದ ಐತಿಹಾಸಿಕ ಚಳವಳಿಯಾದ ಕಾಗೋಡು ಸತ್ಯಾಗ್ರಹಕ್ಕೆ ಗೋಪಾಲಗೌಡರು ಜೀವ ತುಂಬಿದರು.

ADVERTISEMENT

ಕನ್ನಡ ನಾಡಿನ ರಾಜಕಾರಣ, ಚಳವಳಿ, ಪ್ರತಿಭಟನೆ, ಕನ್ನಡಪರ ಹೋರಾಟಗಳು, ಸಾಹಿತ್ಯ ಲೋಕ ಹಾಗೂ ಸಾಂಸ್ಕೃತಿಕ ಲೋಕಗಳ ವಲಯಗಳಲ್ಲಿ ಮಿತ್ರರನ್ನು, ಸಂಗಾತಿಗಳನ್ನು, ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಗೋಪಾಲಗೌಡರು ಕನ್ನಡನಾಡಿನ ಏಕೀಕರಣವಾಗಬೇಕೆಂದು ಹಾಗೂ ಈ ನಾಡಿಗೆ 'ಕರ್ನಾಟಕ' ಎಂಬ ಹೆಸರು ಇಡಬೇಕು ಎಂದು ಒತ್ತಾಯಿಸಿ ಹೋರಾಡಿದ ಮುಂಚೂಣಿ ನಾಯಕರಾಗಿದ್ದರು.

ಸ್ವಂತದ ಲಾಭಗಳ ಹಂಗು ತೊರೆದ ಸಹಜ ಶುದ್ಧ ರಾಜಕಾರಣ ಸಮಾಜದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ಗೋಪಾಲಗೌಡರು ಆಳವಾಗಿ ನಂಬಿದ್ದರು. ಹಾಗೆಯೇ, ಸಣ್ಣಪುಟ್ಟ ತೇಪೆಯ ಸುಧಾರಣೆಗಳಿಂದ ಒಂದು ಅಸಮಾನ ಸಮಾಜದಲ್ಲಿ ತಳಮಟ್ಟದ ಬದಲಾವಣೆಯಾಗಲಾರದು ಎಂಬ ಸತ್ಯವನ್ನೂ ಅರಿತಿದ್ದರು. ಐವತ್ತರ ದಶಕದಲ್ಲಿ ತರುಣ ಗೋಪಾಲಗೌಡರ ಕಾಳಜಿಯಿಂದಾಗಿ ಕೂಡ ಸಮಾಜವಾದಿ ಪಕ್ಷ ಕಾಗೋಡು ಭೂ ಹೋರಾಟದಲ್ಲಿ ಭಾಗಿಯಾಯಿತು. ಆನಂತರ ಕೂಡ ಭೂಮಿಯ ಹಂಚಿಕೆಯ ಪ್ರಶ್ನೆ ಗೋಪಾಲಗೌಡರ ಚಿಂತನೆ ಹಾಗೂ ಹೋರಾಟಗಳ ಭಾಗವಾಗಿಯೇ ಇತ್ತು.

ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಸಮಾಜವಾದಿ ಪಕ್ಷದಿಂದ ಮೈಸೂರು ರಾಜ್ಯದ ಚುನಾವಣಾ ಕಣಕ್ಕಿಳಿದ ಗೋಪಾಲಗೌಡರು ಒಟ್ಟು ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಆಯ್ಕೆಯ ಹಿನ್ನೆಲೆಯಲ್ಲಿ ಅವರ ಸರಳ ಬದುಕಿನ ಶೈಲಿ, ಜಾತ್ಯತೀತ ವ್ಯಕ್ತಿತ್ವ, ನಿಷ್ಠುರ ವಿಮರ್ಶಾ ನೋಟಗಳು ಇರುವಂತೆಯೇ, ಅವರು ರೂಪಿಸಬಯಸಿದ ಶುದ್ಧ ರಾಜಕಾರಣಕ್ಕೆ ಮಲೆನಾಡಿನ ಜನಸಾಮಾನ್ಯರಿಂದ ಹಿಡಿದು ಹಲವು ಜನ ವರ್ಗಗಳ ಬೆಂಬಲವಿದ್ದುದು ಕೂಡ ಮುಖ್ಯ ಕಾರಣವಾಗಿತ್ತು. ಈ ಬಗೆಯಲ್ಲಿ ಶುದ್ಧ ಹಾಗೂ ಅರ್ಥಪೂರ್ಣ ರಾಜಕಾರಣ ಮಾಡಬಯಸುವ ರಾಜಕಾರಣಿಯೊಬ್ಬ ತನ್ನ ಮತದಾರರನ್ನೂ ಶುದ್ಧವಾಗಿರಲು ಪ್ರೇರೇಪಿಸುತ್ತಿರಬೇಕು ಹಾಗೂ ತನ್ನ ನಡೆ, ನುಡಿಗಳ ಮೂಲಕವೇ ಅಂಥ ಪ್ರೇರಣೆಗಳನ್ನು ಸೃಷ್ಟಿಸುತ್ತಿರಬೇಕು ಎಂಬುದು ಗೋಪಾಲಗೌಡರ ಸಹಜ ನಂಬಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.