ಶಿಕಾರಿಪುರ: ಈಗ ಶಾಲೆಗಳಿಗೆ ಬೇಸಿಗೆ ರಜೆ. ಈ ಹೊತ್ತಲ್ಲಿ ಶಾಲಾ ಮಕ್ಕಳ ಅದರಲ್ಲೂ ಗ್ರಾಮೀಣ ಭಾಗದವರಿಗೆ ತಮ್ಮ ದೈನಂದಿನ ಚಟುವಟಿಕೆಯ ಜೊತೆಗೆ ಉತ್ತಮ ಹವ್ಯಾಸಗಳನ್ನು ರೂಪಿಸಲು ರಾಜ್ಯ ಸರ್ಕಾರ ಬೇಸಿಗೆ ಶಿಬಿರ ಆಯೋಜಿಸಲು ಮುಂದಾಗಿದೆ.
ಆ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿದ್ದು, ಶಿಬಿರ ಆಯೋಜಿಸುವ ಹೊಣೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಿದೆ. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡಿದೆ. ಗ್ರಾಮ ಪಂಚಾಯಿತಿಯ ಗ್ರಂಥಾಲಯ ಸಭಾಂಗಣವೇ ವೇದಿಕೆ ಆಗಲಿದೆ.
ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಉಸ್ತುವಾರಿಯಲ್ಲಿ ಏಪ್ರಿಲ್ 15ರಿಂದ 30ರವರೆಗೆ 15 ದಿನ ಬೇಸಿಗೆ ಶಿಬಿರ ನಡೆಯಲಿದೆ. 8ರಿಂದ 13 ವರ್ಷದೊಳಗಿನ 40 ವಿದ್ಯಾರ್ಥಿಗಳಿಗೆ ಮಾತ್ರ ಈ ಶಿಬಿರ ಸೀಮಿತವಾಗಿದ್ದು, ಸ್ಥಳೀಯ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯಲ್ಲೂ ಶಿಬಿರ ನಡೆಯಲಿದ್ದು, ಆಸಕ್ತ ಮಕ್ಕಳು ಗ್ರಂಥಾಲಯ ಮೇಲ್ವಿಚಾರಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಳಿ ಹೆಸರು ನೋಂದಾಯಿಸಿಕೊಳ್ಳಬಹುದು.
ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸುವುದು, ನೈತಿಕ, ನಾಯಕತ್ವ ವಿಷಯ, ಅಂಕಿ-ಸಂಖ್ಯೆ, ವಿಜ್ಞಾನ ವಿಷಯ, ಕಾರ್ಯಯೋಜನೆ ರೂಪಿಸುವುದು, ಕೌಶಲ ಅಭಿವೃದ್ಧಿಪಡಿಸಿಕೊಳ್ಳುವುದನ್ನು ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ. ವಿಜ್ಞಾನ, ಗಣಿತ ಚಟುವಟಿಕೆ ನಡೆಸಲು ಸ್ಥಳೀಯ ಶಿಕ್ಷಕರು, ಸ್ವಯಂ ಪ್ರೇರಿತ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುವುದು. ಗ್ರಂಥಾಲಯದ ಪರಿಚಯ ಮಾಡಿಸುವುದು, ಎಲ್ಲರಿಂದಲೂ ಗಟ್ಟಿ ಓದು, ಬರೆಯುವ ಸಾಮರ್ಥ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹೆಚ್ಚಿಸುವ ಚಟುವಟಿಕೆ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸ್ಥಳೀಯ ಕಲಾವಿದರನ್ನು ಗುರುತಿಸಿ ಅವರಿಂದ ಕಲಾ ಪ್ರಕಾರದ ಪರಿಚಯ ಮಾಡಿಸಬೇಕು, ಪ್ರತಿ ಐದು ದಿನಗಳಿಗೊಮ್ಮೆ ಮಕ್ಕಳ ಅನುಭವ ಗೋಡೆ ಪತ್ರಿಕೆ ಮೂಲಕ ಪ್ರಚುರಪಡಿಸಬೇಕು, ಪ್ರತಿನಿತ್ಯ ಕಲಿತ ವಿಷಯದ ಅವಲೋಕನ, ಪುನರ್‌ಮನನ, ಪ್ರಶ್ನೋತ್ತರ, ಶಿಬಿರ ನಡೆಯುವ ಪ್ರದೇಶವನ್ನು ಪ್ಲಾಸ್ಟಿಕ್ ಬಳಸದೇ ಸಿಂಗರಿಸಬೇಕು, ಮಾದರಿ ಜೋಡಣೆ, ಕಲಿಕಾ ಚಪ್ಪರ ಹಾಕಬೇಕು, ಶಿಬಿರದ ಕೊನೆಯ ದಿನ ಮಕ್ಕಳೇ ಸಮಾರೋಪ ಸಮಾರಂಭ ಆಯೋಜಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಗ್ರಾ.ಪಂ. ಅರಿವು ಕೇಂದ್ರದಲ್ಲಿ ನಡೆಯುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಯಶಸ್ವಿಗೆ ಸಂಘ ಸಂಸ್ಥೆಗಳು ಸ್ವಸಹಾಯ ಸಂಘಗಳು ಸಂಪನ್ಮೂಲ ವ್ಯಕ್ತಿಗಳು ಮುಖಂಡರು ಕೈಜೋಡಿಸಬೇಕುಬಿ.ವೈ.ರಾಘವೇಂದ್ರ ಸಂಸದ
ಮಕ್ಕಳಲ್ಲಿ ಓದುವ ಹವ್ಯಾಸ ಕ್ರಿಯಾಶೀಲತೆ ಉತ್ತೇಜಿಸಿ ವ್ಯಕ್ತಿತ್ವ ರೂಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೇಸಿಗೆ ಶಿಬಿರ ಆಯೋಜಿಸಲು ಮುಂದಾಗಿದ್ದೇವೆ ಅದರ ಯಶಸ್ಸಿಗೆ ಪೋಷಕರು ಕೈಜೋಡಿಸಿರಿಎನ್. ಹೇಮಂತ್ ಸಿಇಒ ಜಿ.ಪಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.