ADVERTISEMENT

ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಸರ್ಕಾರ ವಿಫಲ: ಡಾ.ಕೆ.ಪ್ರಕಾಶ್‌ ವಾಗ್ದಾಳಿ

ಸಿಪಿಐ(ಎಂ) ಜಿಲ್ಲಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 5:39 IST
Last Updated 1 ನವೆಂಬರ್ 2021, 5:39 IST
ಭದ್ರಾವತಿ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ಸಿಪಿಐಎಂ ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಸಮಿತಿ ಸದಸ್ಯ ಡಾ.ಕೆ. ಪ್ರಕಾಶ್ ಮಾತನಾಡಿದರು.
ಭದ್ರಾವತಿ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ಸಿಪಿಐಎಂ ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಸಮಿತಿ ಸದಸ್ಯ ಡಾ.ಕೆ. ಪ್ರಕಾಶ್ ಮಾತನಾಡಿದರು.   

ಭದ್ರಾವತಿ: ‘ರಾಷ್ಟ್ರದ ಆರ್ಥಿಕ ಪರಿಸ್ಥಿತಿಯನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳುವಲ್ಲಿ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಡಾ.ಕೆ. ಪ್ರಕಾಶ್ ಹರಿಹಾಯ್ದರು.

ಭಾನುವಾರ ನಡೆದ ಪಕ್ಷದ ಜಿಲ್ಲಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ವ್ಯಾಪಾರಿ ಮನೋವೃತ್ತಿ ವ್ಯಕ್ತಿಗಳಿಂದ ದೇಶ ನಡೆದರೆ ಪ್ರಜೆಗಳ ಪರಿಸ್ಥಿತಿ ಹೀನಾಯ ಹಂತಕ್ಕೆ ತಲುಪುತ್ತದೆ ಎಂಬುದಕ್ಕೆ ಸದ್ಯದ ಮೋದಿ ನೇತೃತ್ವದ ಸರ್ಕಾರದ ಆಡಳಿತ ವೈಖರಿ ಉದಾಹರಣೆ.ಎಲ್ಲಾ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಮೂಲಕ ತಮ್ಮ ಹೊಗಳುಭಟ್ಟರಿಗೆ ಹಣ ಮಾಡಿಕೊಳ್ಳಲು ಅವಕಾಶ ನೀಡಿರುವ ಕೇಂದ್ರ ಸರ್ಕಾರ ಜನರ ಅಗತ್ಯಕ್ಕೆ ನೆರವಾಗುವ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ಸಹ ತನ್ನ ವೈಫಲ್ಯದ ಹಾದಿ ಹಿಡಿದಿದೆ’ ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಾ ಬದಲಾವಣೆ ರಭಸದಲ್ಲಿ ಅಧಿಕಾರಿ ಹಿಡಿದ ಬಿಜೆಪಿ ಸಹ ಜನಸಾಮಾನ್ಯರ ಪಾಲಿಗೆ ಯಾವುದೇ ನೆರವನ್ನು ನೀಡಿಲ್ಲ. ಇದನ್ನು ನೋಡಿದರೆ ಭವಿಷ್ಯದ ಭಾರತವನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ.ದೇಶದ 100 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡಿದೆ ಎಂದು ಮೋದಿ ಹಿಂಬಾಲಕರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನೀಡುತ್ತಿದ್ದಾರೆ. ಇದರಲ್ಲಿ ಎಷ್ಟು ಸುಳ್ಳಿನ ಕಂತೆ ಹರಡಿದೆ ಎಂದರೆ 250 ಕೋಟಿ ಜನರಿಗೆ ಲಸಿಕೆ ನೀಡಿರುವ ಚೀನಾವನ್ನು ಭಾರತ ಹಿಂದಿಕ್ಕಿದೆ ಎಂದು ಪ್ರಚಾರ ನಡೆಸುವ ಮೂಲಕ ನಗೆಪಾಟಲಿಗೆ ಈಡಾಗಿದೆ’ ಎಂದರು.

ADVERTISEMENT

ಸರ್ಕಾರಿ ವೈದ್ಯಕೀಯ ಸಂಸ್ಥೆಗಳಿಗೆ ಲಸಿಕೆ ಉತ್ಪಾದನೆ ಮಾಡಲು ಅವಕಾಶ ನೀಡದೆ ಮೋದಿ ತಮ್ಮ ಬೆಂಬಲಿಗರಿಗೆ ಅದರ ಉತ್ಪಾದನೆ ಮಾಡುವ ಹಕ್ಕನ್ನು ನೀಡಲಾಗಿದೆ ಎಂದುದೂರಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಜಿ.ಎಸ್.ನಾಗರಾಜ್ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಕೆ. ಪ್ರಭಾಕರನ್, ಕೆ. ಮಂಜಣ್ಣ, ಎಂ. ಅನಂತರಾಮು, ಕಾರ್ಯದರ್ಶಿ ಎಂ. ನಾರಾಯಣ, ಅಕ್ಷರ ದಾಸೋಹ ಹನುಮಮ್ಮ, ಅಂಗನವಾಡಿಯ ತುಳಸಿಪ್ರಭಾ ಇದ್ದರು.

ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಖಂಡನಾ ನಿರ್ಣಯವನ್ನು ಅಂಗೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.