ADVERTISEMENT

ಆನವಟ್ಟಿ: ಮುಚ್ಚುವ ಹಂತದಲ್ಲಿದ್ದ ಬಂಕಸಾಣ ಸರ್ಕಾರಿ ಶಾಲೆಗೆ ಮರುಜೀವ

ಅಧಿಕಾರಿಗಳ ಮನವೊಲಿಕೆ: ಮಕ್ಕಳನ್ನು ಸೇರಿಸಲು ಪಾಲಕರ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 5:33 IST
Last Updated 6 ಜುಲೈ 2025, 5:33 IST
<div class="paragraphs"><p>ಬಂಕಸಾಣ ಸರ್ಕಾರಿ ಶಾಲೆಯಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸುತ್ತಿರುವ ಬಿಇಒ ಆರ್‌. ಪುಷ್ಪಾ&nbsp;</p></div>

ಬಂಕಸಾಣ ಸರ್ಕಾರಿ ಶಾಲೆಯಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸುತ್ತಿರುವ ಬಿಇಒ ಆರ್‌. ಪುಷ್ಪಾ 

   

ಆನವಟ್ಟಿ: ಪ್ರಸಕ್ತ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳು ದಾಖಲಾಗದ ಕಾರಣ, ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಅಧಿಕಾರಿಗಳ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. 

ಸೊರಬ ತಾಲ್ಲೂಕಿನ ಬಂಕಸಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ದಾಖಲಾತಿ ಇಲ್ಲದೆ ಮುಚ್ಚುವ ಸ್ಥಿತಿಯಲ್ಲಿತ್ತು. ಈ ಹಿಂದೆ ಇದ್ದ ಶಿಕ್ಷಕರು ಬೋಧನೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಜೊತೆಗೆ, ಗ್ರಾಮದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯುವ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದರು. ಹೀಗಾಗಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಕುಸಿದಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಒಳಗೊಂಡ ಅಧಿಕಾರಿಗಳ ತಂಡವು ಪಾಲಕರ ಮನ ಒಲಿಸಿ 10 ದಿನಗಳಲ್ಲಿ 14 ವಿದ್ಯಾರ್ಥಿಗಳನ್ನು ಮತ್ತೆ ಸರ್ಕಾರಿ ಶಾಲೆಗೆ ಕರೆತಂದು ಪ್ರವೇಶ ಕೊಡಿಸುವ ಮೂಲಕ ಶಾಲೆಯನ್ನು ಪ್ರಾರಂಭಿಸಿದೆ. 

ADVERTISEMENT

ಎರಡು ಎಕರೆ ವಿಸ್ತೀರ್ಣದಲ್ಲಿ 5 ಶಾಲಾ ಕೊಠಡಿಗಳು, ಅಡುಗೆ ಕೊಠಡಿ, ಆಟದ ಮೈದಾನ, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಹೊಂದಿರುವ ಈ ಶಾಲೆಯಲ್ಲಿ, ಈ ಹಿಂದೆ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದರು. 2024ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 6ಕ್ಕೆ ಇಳಿಕೆಯಾಯಿತು. ಈ ವರ್ಷ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದರು. ಶಿಕ್ಷಣ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್‌, ಶಿಕ್ಷಣ ಸಂಯೋಜಕ ಅರುಣಕುಮಾರ್‌, ಸಿಆರ್‌ಪಿಗಳಾದ ರಾಜು ಗಂಜೇರ್‌, ಸುಮತೇಂದ್ರ ಅವರು ಪಾಲಕರ ಮನೆಗಳಿಗೆ ಭೇಟಿ ನೀಡಿ ಮನವೊಲಿಸಲು ಯತ್ನಿಸಿ ಸಫಲರಾಗಿದ್ದಾರೆ.

ಬಿಇಒ ಆರ್‌. ಪುಷ್ಪಾ ಅವರು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಗೌಡ ನೇತೃತ್ವದಲ್ಲಿ ಶಾಲೆಯಲ್ಲಿ ಪಾಲಕರ ಸಭೆ ನಡೆಸಿ ಪರಿಸ್ಥಿತಿಯ ಮನವರಿಕೆ ಮಾಡಿದರು.

‘ಶಿಕ್ಷಕಿ ಅರ್ಪಣಾ ಹಾಗೂ ಅತಿಥಿ ಶಿಕ್ಷಕ ಶಿವಪುತ್ರಪ್ಪ ಅವರನ್ನು ಶಾಲೆಗೆ ಹೊಸದಾಗಿ ನಿಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾದರೆ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ನೇಮಿಸುವುದಾಗಿ ಸಚಿವರು ಹೇಳಿದ್ದಾರೆ. ಬೋಧನೆಗೆ ಶಿಕ್ಷಕರ ಕೊರತೆ ಆಗುವುದಿಲ್ಲ’ ಎಂದು ಪುಷ್ಪಾ ಅವರು ಮನದಟ್ಟು ಮಾಡಿದರು. ಈ ಸಭೆಯಲ್ಲಿ ವಿಷಯ ಮನದಟ್ಟಾದ ಬಳಿಕ ಕೆಲವು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ನಿರ್ಧರಿಸಿದ್ದು, ಮತ್ತೆ ಶಾಲೆಯ ಬಾಗಿಲು ತೆರೆದಿದ್ದು, ಮಕ್ಕಳ ಕಲರವಕ್ಕೆ ಸಾಕ್ಷಿಯಾಗಿದೆ.

‘ಇಂಗ್ಲಿಷ್ ಮಾಧ್ಯಮ ಇಲ್ಲೇ ಆರಂಭಿಸಿ’

‘ಬಂಕಸಾಣದಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಲಗಡ್ಡೆ ಹಾಗೂ ಜಡೆ ಗ್ರಾಮದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೋಗುತ್ತಾರೆ. ಇಲ್ಲಿನ ಸರ್ಕಾರಿ ಶಾಲೆಗೆ ಮಾದರಿ ಶಾಲೆಯ ಮಾನ್ಯತೆ ನೀಡಿ ಎಲ್‌ಕೆಜಿ ಯುಕೆಜಿ ಜೊತೆಗೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಬೋಧನೆ ಪ್ರಾರಂಭ ಮಾಡಿದರೆ ಬಂಕಸಾಣ ಸೇರಿದಂತೆ ಅಕ್ಕಪಕ್ಕದ ಗ್ರಾಮದ ವಿದ್ಯಾರ್ಥಿಗಳು ಇಲ್ಲಿ ದಾಖಲಾಗಲಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. 

‘ಶಿಕ್ಷಕರ ವಿಚಾರದಲ್ಲಿ ದಾಖಲಾತಿ ಕುಸಿತ’

‘ಈ ಹಿಂದೆ ಇದ್ದ ಶಿಕ್ಷಕರ ನಿರ್ಲಕ್ಷ್ಯದಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ. ಶಿಕ್ಷಕರು ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದರು. ಹೀಗಾಗಿ ಬೇರೆ ಶಿಕ್ಷಕರನ್ನು ನಿಯೋಜಿಸಿದರೆ ಮಾತ್ರ ಮಕ್ಕಳನ್ನು ಸೇರಿಸುತ್ತೇವೆ ಎಂದು ಬಿಇಒ ಅವರಿಗೆ ಸ್ಪಷ್ಟಪಡಿಸಿದ್ದೆವು. ನಮ್ಮ ಕೋರಿಕೆಯಂತೆ ಬದಲಿ ಶಿಕ್ಷಕರನ್ನು ನಿಯೋಜಿಸಲಾಗಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಬಂಕಸಾಣ ಹೇಳಿದರು. ‘ಖಾಸಗಿ ಶಾಲೆಗೆ ಸೇರಿಸಿದ್ದ ನನ್ನ ಎರಡು ಮಕ್ಕಳನ್ನು ತಂದು ಇಲ್ಲಿಗೆ ಸೇರಿಸಿದ್ದೇನೆ. ಪ್ರಾರಂಭದ ದಿನಗಳಿಂದಲೇ ಕಾಯಂ ಶಿಕ್ಷಕರು ಶಾಲೆಯಲ್ಲಿರಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿಯಲ್ಲಿ ವಿಶೇಷ ಮೀಸಲಾತಿ ನೀಡಬೇಕು. ಇದರಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗುತ್ತದೆ‘ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.