ADVERTISEMENT

ಗ್ರಾ.ಪಂ. ಚುನಾವಣೆ: ಪ್ರಮಾಣಪತ್ರ ಅಗತ್ಯ ಇಲ್ಲ

ಉಪವಿಭಾಗಾಧಿಕಾರಿ ಪ್ರಸನ್ನ ವಿ. ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 13:52 IST
Last Updated 11 ಡಿಸೆಂಬರ್ 2020, 13:52 IST
ಪ್ರಸನ್ನ ವಿ.
ಪ್ರಸನ್ನ ವಿ.   

ಸಾಗರ: ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸುವವರು ನಾಮಪತ್ರದೊಂದಿಗೆ ನೋಟರಿಯವರಿಂದ ದೃಢೀಕರಿಸಿದ ಪ್ರಮಾಣಪತ್ರ ನೀಡುವ ಅಗತ್ಯ ಇಲ್ಲ ಎಂದು ಉಪವಿಭಾಗಾಧಿಕಾರಿ ಪ್ರಸನ್ನ ವಿ. ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಗದಿತ ನಮೂನೆಯಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಕುಟುಂಬದ ಹಾಗೂ ಆಸ್ತಿಯ, ಪ್ರಕರಣಗಳ ವಿವರಗಳನ್ನು ಬಿಳಿ ಹಾಳೆಯಲ್ಲಿ ಸ್ವಯಂ ದೃಢೀಕರಿಸಿ ನೀಡಿದರೆ ಸಾಕು. ಯಾವುದೇ ಸ್ಟಾಂಪ್ ಪೇಪರ್ ಹಾಗೂ ಪ್ರಮಾಣಪತ್ರದ ಅವಶ್ಯಕತೆಯಿಲ್ಲ’ ಎಂದು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸುವವರು ಈ ಹಿಂದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಗುತ್ತಿಗೆ ಕಾರ್ಯ ನಡೆಸಿ ಬ್ಯಾಂಕ್ ಗ್ಯಾರಂಟಿ ನೀಡಿದ್ದು, ಆ ಅವಧಿ ಇನ್ನೂ ಮುಗಿಯದೆ ಇದ್ದರೆ ಅಂತಹವರು ಸ್ಪರ್ಧೆಗೆ ಅನರ್ಹರಾಗುತ್ತಾರೆ. ಆದರೆ ಈ ಬಗ್ಗೆ ಚುನಾವಣಾಧಿಕಾರಿಗಳೇ ತಕರಾರು ತೆಗೆಯುವುದಿಲ್ಲ. ಪ್ರತಿಸ್ಪರ್ಧಿಗಳು ದಾಖಲೆಗಳೊಂದಿಗೆ ದೂರು ನೀಡಿದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ADVERTISEMENT

ಗ್ರಾಮೀಣ ಭಾಗದ ಸಣ್ಣಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಕಾರಣ ಅಬಕಾರಿ ಇಲಾಖೆಯ ವಿಶೇಷ ತಂಡವನ್ನು ರಚಿಸಲಾಗಿದೆ. ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಎರಡನೆ ಶನಿವಾರ ಸಹ ಅಭ್ಯರ್ಥಿಗಳ ನಾಮಪತ್ರ ಸ್ವೀಕರಿಸಲಾಗುವುದು. ಸಾಗರ, ಸೊರಬ, ಶಿಕಾರಿಪುರ, ಹೊಸನಗರ ತಾಲ್ಲೂಕಿನಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಆಯಾ ಭಾಗದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ನಗರಸಭೆ ಅಥವಾ ಪುರಸಭೆ ಆಯುಕ್ತರು, ಸರ್ಕಲ್ ಇನ್‌ಸ್ಪೆಕ್ಟರ್ ಸೇರಿ ಆರು ಜನರ ತಂಡವನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಡಿವೈಎಸ್‌ಪಿ ವಿನಾಯಕ ಶೆಟಗೇರಿ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ನಗರಸಭೆ ಪೌರಾಯುಕ್ತ ಎಚ್.ಕೆ. ನಾಗಪ್ಪ, ಪರಮೇಶ್ವರ ಟಿ. ಬಾಲಚಂದ್ರ, ಹೇಮಂತ್ ದೊಳ್ಳೆ, ಸುರೇಶ್, ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.