
ಹೊಸನಗರ: ‘ಗೃಹಲಕ್ಷ್ಮಿ ಯೋಜನೆಗೆ ಜೀವಿತ ಪ್ರಮಾಣ ಪತ್ರ ಅರ್ಜಿ ಸಲ್ಲಿಕೆಗೆ ಇನ್ನು ಸರ್ಕಾರದಿಂದ ಅಧಿಕೃತ ದಿನಾಂಕ ನಿಗದಿಯಾಗಿಲ್ಲ’ ಎಂದು ಹೊಸನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೊಣೆ ಹೇಳಿದರು.
ಜೀವಿತ ಪ್ರಮಾಣ ಪತ್ರ ಅರ್ಜಿ ಸಲ್ಲಿಕೆಗೆ ತಾಲ್ಲೂಕಿನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪಷ್ಟನೆ ನೀಡಿದರು.
‘ಗೃಹಲಕ್ಷ್ಮಿ ಯೋಜನೆಗೆ ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಮೃತಪಟ್ಟವರ ಖಾತೆಗೆ ಹಣ ಜಮಾ ಆಗುವುದನ್ನು ತಡೆಯಲು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸಲು ಸರ್ಕಾರ ಈ ಹೊಸ ನಿಯಮ ಜಾರಿಗೆ ತರುತ್ತಿದೆ. ಆದರೆ ಅರ್ಜಿ ಸಲ್ಲಿಕೆಗೆ ಅಧಿಕೃತ ದಿನಾಂಕವನ್ನು ಇನ್ನು ನಿಗದಿಪಡಿಸಿಲ್ಲ ನಿಗದಿಯಾದ ಬಳಿಕ ಪ್ರತಿಯೊಬ್ಬ ಗೃಹಲಕ್ಷ್ಮಿ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬೇಕು’ ಎಂದು ತಿಳಿಸಿದರು.
‘ತಾಲ್ಲೂಕಿನಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿದ್ದು ಯಾವುದೇ ಫಲಾನುಭವಿಗಳು ಗೊಂದಲಕ್ಕೆ ಒಳಗಾಗಬಾರದು’ ಎಂದು ತಿಳಿಸಿದರು.
ಅಲ್ಲದೆ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಪಂಚ ಗ್ಯಾರಂಟಿಗಳನ್ನು ಪ್ರತಿಯೊಬ್ಬ ಫಲಾನುಭವಿಗಳಿಗೆ ತಲುಪಿಸುವ ದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬ ಉಸ್ತುವಾರಿ ಜವಾಬ್ದಾರಿಯನ್ನು ನೀಡಿದ್ದು ಸಮಿತಿಯ ಸದಸ್ಯರಿಗೆ ಅವರ ಕಾರ್ಯ ವ್ಯಾಪ್ತಿಗೆ ಹೊಂದಿಕೆಯಾಗುವಂತೆ ಗ್ರಾಮ ಪಂಚಾಯಿತಿಗಳ ಜವಾಬ್ದಾರಿಯನ್ನು ವಹಿಸಿದರು.
‘ಸರ್ಕಾರದಿಂದ ನೀಡಲಾದ ಪಡಿತರಗಳನ್ನು ಸಂಗ್ರಹಿಸಿಡುವ ಗೋದಾಮಗಳಲ್ಲಿ ಸ್ವಚ್ಛತೆಯ ಕೊರತೆ ಹೆಚ್ಚಿದ್ದು ಈ ಬಗ್ಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಪ್ರತಿ ಗೋದಾಮುಗಳನ್ನು ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸುವಂತೆ’ ಸೂಚಿಸಿದರು.
‘ಯೋಜನೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಅಧಿಕಾರಿಯು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಿರ್ವಹಿಸುತ್ತಿರುವ ಕೆಲಸಗಳ ಕುರಿತು ಸಭೆಗೆ ಪ್ರತಿ ಬಾರಿಯೂ ಮಾಹಿತಿಯನ್ನು ನೀಡುವಂತೆ’ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇಒ ನರೇಂದ್ರ ಕುಮಾರ್ ಸಮಿತಿಯ ಸದಸ್ಯರಾದ ನರಸಿಂಹ ಪೂಜಾರಿ, ಸಿಂಥಿಯ ಸೆರವೊ, ಸುಮಂಗಲ ದೇವರಾಜ್, ಅಕ್ಷತಾ ನಾಗರಾಜ್, ಪೂರ್ಣಿಮಾ, ಸಂತೋಷ್ ಮಳವಳ್ಳಿ, ಅನಿಲ್ ಕುಮಾರ್, ಎನ್. ಟಿ. ಕರುಣಾಕರ, ಅಮೀರ್ ಹಂಜಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.