ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ: ‘ಅತಿಥಿ ಉಪನ್ಯಾಸಕರ ಉದ್ಯೋಗ ಹಕ್ಕು ಸಂರಕ್ಷಿಸಬೇಕು. ಉಪನ್ಯಾಸಕರನ್ನು ವೃತ್ತಿಯಲ್ಲಿ ಮುಂದುವರೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು’ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸೋಮಶೇಖರ ಎಚ್. ಶಿಮೊಗ್ಗಿ ಒತ್ತಾಯಿಸಿದರು.
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿದ ವಿದ್ಯಾರ್ಹತೆ ಪಡೆಯದ 5,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುವ ಸಂಕಷ್ಟದಲ್ಲಿದ್ದಾರೆ. ದಶಕಗಳಿಂದ ಸಲ್ಲಿಸಿದ ಅನುಭವವನ್ನೇ ಆಧಾರವಾಗಿ ಪರಿಗಣಿಸಿ ಸೇವೆಯಲ್ಲಿ ಮುಂದುವರೆಯಲು ಸರ್ಕಾರ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ನೂತನ ನೇಮಕಾತಿ, ವರ್ಗಾವಣೆ ಮತ್ತು ಕಾರ್ಯಭಾರದ ಕೊರತೆಯಿಂದ ಹೊರಗುಳಿದ ಅತಿಥಿ ಉಪನ್ಯಾಸಕರನ್ನು ಸೇವಾ ಜೇಷ್ಠತೆಯ ಆಧಾರದ ಮೇಲೆ ಈ ಕೂಡಲೇ ಹೆಚ್ಚುವರಿ ಬೋಧನಾ ಕಾರ್ಯಕ್ಕೆ ನೇಮಕಾತಿ ನಡೆಸಬೇಕೆಂದು ಆಗ್ರಹಿಸಿದರು.
ಡಿಎಸ್‌ಎಸ್ ಸಂಚಾಲಕ ಟಿ.ಎಚ್.ಹಾಲೇಶಪ್ಪ, ಅಹಿಂದ ಜಾಗೃತ ವೇದಿಕೆಯ ಜಿಲ್ಲಾ ಘಟಕ ಅಧ್ಯಕ್ಷ ನಟರಾಜ್, ಪ್ರಮುಖರಾದ ರಾಚಪ್ಪ, ಶಿವಕುಮಾರ್, ವಿ. ಧನಂಜಯಪ್ಪ, ಗಣಪತಿ, ಚಂದ್ರಪ್ಪ, ಸಂಗಯ್ಯ, ಅನಂತಕುಮಾರ್, ಸತೀಶ್, ಮಲ್ಲಿಕಾರ್ಜುನ್, ವಸಂತ್ ಕುಮಾರ್, ರೂಪಾ, ದೀಪಾ, ಸುಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.