ADVERTISEMENT

ದೇವಸ್ಥಾನದ ಅಭಿವೃದ್ಧಿಗೆ ಬೇಳೂರು ಅಡ್ಡಿ: ಹಾಲಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:52 IST
Last Updated 27 ಜುಲೈ 2025, 5:52 IST
ರಿಪ್ಪನ್ ಪೇಟೆ ಸಮೀಪದ ಅಮ್ಮನಘಟ್ಟ ಜೇನುಕಲ್ಲುಮ್ಮ ದೇವಸ್ಥಾನದಲ್ಲಿ ಎಚ್. ಹಾಲಪ್ಪ ಹರತಾಳು ಸುದ್ದಿಗೋಷ್ಠಿ ನಡೆಸಿದರು
ರಿಪ್ಪನ್ ಪೇಟೆ ಸಮೀಪದ ಅಮ್ಮನಘಟ್ಟ ಜೇನುಕಲ್ಲುಮ್ಮ ದೇವಸ್ಥಾನದಲ್ಲಿ ಎಚ್. ಹಾಲಪ್ಪ ಹರತಾಳು ಸುದ್ದಿಗೋಷ್ಠಿ ನಡೆಸಿದರು   

ರಿಪ್ಪನ್ ಪೇಟೆ: ಕೋಡೂರು ಸಮೀಪದ ಐತಿಹಾಸಿಕ ಅಮ್ಮನಘಟ್ಟ ದೇವಸ್ಥಾನದ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀಸಲಿಟ್ಟ ₹100 ಕೋಟಿ ಅನುದಾನ ಬಿಡುಗಡೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ತಡೆ ಒಡ್ಡಿ, ದೇವಸ್ಥಾನದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಲಪ್ಪ ಹರತಾಳು ಆರೋಪಿಸಿದರು.

ಶುಕ್ರವಾರ ಅಮ್ಮನಘಟ್ಟ ದೇವಸ್ಥಾನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಾನು ಶಾಸಕನಾಗಿದ್ದ ಅವಧಿಯಲ್ಲಿ ನೀರಾವರಿ ನಿಗಮದ ಮೂಲಕ ದೇವಸ್ಥಾನದ ಮೂಲಸೌಕರ್ಯ ಕಲ್ಪಿಸಲು ಹಾಗೂ ಸಭಾಭವನ ನಿರ್ಮಿಸಲು ₹ 1 ಕೋಟಿ ಅನುದಾನ ನೀಡಲಾಗಿತ್ತು. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸಲಾಗಿತ್ತು. ಅಧಿಕಾರ ಬದಲಾವಣೆಯ ಬಳಿಕ, ದೇವಸ್ಥಾನದ ಧರ್ಮದರ್ಶಿ ಸಮಿತಿಗೆ ಅಭಿವೃದ್ಧಿಯ ಪ್ರಸಂಶೆ ದೊರಕಬಾರದು ಎಂಬ ಕಾರಣಕ್ಕೆ ಹಣ ಬಿಡುಗಡೆಯನ್ನು ತಡೆ ಹಿಡಿದಿರುವ ಶಾಸಕರ ರಾಜಕೀಯ ನಿಲುವು ಖಂಡನೀಯ’ ಎಂದರು.

ADVERTISEMENT

ಸರ್ಕಾರದ ಅನುದಾನ ಕೈ ತಪ್ಪಿದರೂ ಎದೆಗುಂದದ ಧರ್ಮದರ್ಶಿ ಸಮಿತಿಯು ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ, ಬೃಹತ್ ಬಂಡೆಯ ನಡುವೆ ನೆಲೆನಿಂತ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಗೆ ಶಿಲಾಮಯ ದೇವಸ್ಥಾನ ನಿರ್ಮಿಸಿ ಲೋಕಾರ್ಪಣೆ ಮಾಡಿದೆ. ಇದು ದೈವಿಶಕ್ತಿಯ ಪವಾಡ. ಯಾರೇ ಅಡ್ಡಿ ಉಂಟುಮಾಡಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ದೇವಸ್ಥಾನದ ಸೇವಾ ಸಮಿತಿಯ ಧರ್ಮದರ್ಶಿ ಬಿ. ಸ್ವಾಮಿರಾವ್ ಮಾತನಾಡಿ, ದೇವಸ್ಥಾನಕ್ಕೆ ಹತ್ತಿ ಬರಲು ಮೆಟ್ಟಲುಗಳ ನಿರ್ಮಾಣದ ಕೆಲಸ ಬಾಕಿಯಿದ್ದು, ಅದನ್ನು ಪೂರ್ಣಗೊಳಿಸಲಾಗುವುದು ಎಂದರು.

ಧರ್ಮದರ್ಶಿ ಬಿ. ಸ್ವಾಮಿರಾವ್ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಮಹಾಶಕ್ತಿಕೇಂದ್ರ ಅಧ್ಯಕ್ಷ ಎನ್.ಸತೀಶ್, ಆರ್.ಟಿ.ಗೋಪಾಲ, ಹಾಲಗದ್ದೆ ಉಮೇಶ್,ಮೆಣಸೆ ಆನಂದ್ , ಮನೋಧರ, ಅಬ್ಬಿ ಕಿರಣ್‌ಕುಮಾರ್, ನಗರ ನಿತಿನ್, ಸುಧೀರ್‌ಭಟ್ , ವಿಜೇಂದ್ರರಾವ್ ಕೋಡೂರು, ಮುಂಡಾನೆ ಮೋಹನ್, ಜ್ಯೋತಿ, ಸುಮಾ ಹಾಗೂ ಅಭಿಲಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.