ADVERTISEMENT

ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಹರ್ಷ ಸಹೋದರಿ ಅಶ್ವಿನಿ ಆಕ್ರೋಶ

‘ಗೊತ್ತಾಯ್ತು, ಎಲ್ಲಿಯೂ ನ್ಯಾಯ ಸಿಗೊಲ್ಲ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 18:12 IST
Last Updated 7 ಜುಲೈ 2022, 18:12 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಶಿವಮೊಗ್ಗ: ‘ತಮ್ಮನ ಹತ್ಯೆಯ ತನಿಖೆ ವಿಚಾರದಲ್ಲಿ ಏನು ನಡೆಯುತ್ತಿದೆ ಎಂದು ನಾವು ಕೇಳುವುದೇ ತಪ್ಪಾ? ನಮಗೆ ಜೋರು ಮಾಡಿ ಬಾಯಿ ಮುಚ್ಚಿಸಿ ಕಳಿಸ್ತಾರೆ ಇವರು. ಅಂದರೆ ನಾವು ನ್ಯಾಯ ಕೇಳುವುದು ತಪ್ಪಾ?’ ಎಂದು ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಸಹೋದರಿ ಅಶ್ವಿನಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಶಿವಮೊಗ್ಗದಲ್ಲಿ 2022ರ ಫೆಬ್ರುವರಿ 20ರಂದು ಹರ್ಷ ಹತ್ಯೆಯಾಗಿತ್ತು. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸುತ್ತಿದೆ.

ಸಚಿವರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದ ಅಶ್ವಿನಿ, ತನಿಖೆ ವಿಷಯ ಮಾತನಾಡಲು ಮುಂದಾದಾಗ, ‘ನಿಮ್ಮ ಇಡೀ ಕುಟುಂಬದ ಜೊತೆ ನಾವು ನಿಂತಿದ್ದೇವೆ. ನಾವೇನು ನಿಮಗೆ ದ್ರೋಹ ಮಾಡುತ್ತಿದ್ದೇವೆ ಎಂಬಂತೆ ವರ್ತಿಸುತ್ತಿದ್ದೀರಲ್ಲ’ ಎಂದು ಸಚಿವ ಜ್ಞಾನೇಂದ್ರ ಹೇಳುತ್ತಾರೆ. ಆಗ ಅಶ್ವಿನಿ ಆಕ್ರೋಶದಿಂದ ವಾಪಸಾಗುತ್ತಾರೆ. ಈ ವಿಡಿಯೊ ವೈರಲ್ ಆಗಿದೆ.

ADVERTISEMENT

ಈ ವೇಳೆ ವ್ಯಕ್ತಿಯೊಬ್ಬರು ಅಶ್ವಿನಿ ಅವರನ್ನು ಸಮಾಧಾನಪಡಿಸಲು ಮುಂದಾದಾಗ, ‘ಇಲ್ಲಿಯವರೆಗೆ ಬಂದಿದ್ದೀವಿ ಅಂದರೆ ಗೃಹ ಸಚಿವರು ರೆಸ್ಪಾನ್ಸ್ ಮಾಡುವುದು ಬಿಟ್ಟು ಜೋರು ಮಾಡುತ್ತಾರೆ. ನಾವು ಯಾರ ಹತ್ತಿರ ನ್ಯಾಯ ಕೇಳಬೇಕು? ಎಲ್ಲಿಯೂ ನ್ಯಾಯ ಸಿಗುವುದಿಲ್ಲ ಎಂಬುದು ಗೊತ್ತಾಗಿ ಹೋಯ್ತು’ ಎಂದು ಆಕ್ರೋಶ ವ್ಯಕ್ತಪಡಿಸಿರುವ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ.

ನಯವಂಚಕ ಬಿಜೆಪಿ: ಕಾಂಗ್ರೆಸ್ ಟೀಕೆ

ಈ ವಿಡಿಯೊವನ್ನು ಪಕ್ಷದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ಹರ್ಷನ ಸಾವಿನಲ್ಲಿ ರಾಜಕೀಯ ಲಾಭ ಪಡೆಯಲು ಹೊರಟ ನೀಚರೇ, ಆತನ ಸಹೋದರಿ ನ್ಯಾಯ ಕೇಳಿದರೆ ಬೈದು ಕಳುಹಿಸುತ್ತೀರಾ’ ಎಂದು ಪ್ರಶ್ನಿಸಿದೆ.

‘ಸೆಕ್ಷನ್ 144 ಜಾರಿಯಲ್ಲಿದ್ದಾಗಲೂ ಹರ್ಷನ ಶವಯಾತ್ರೆ ಮಾಡಿ ಕಲ್ಲು ತೂರಿಸಿದ ನಾಯಕರೇ ಈಗೆಲ್ಲಿದ್ದೀರಿ? ಯಾರಾದರೂ ‘ಹಿಂದೂ ಶವ’ ಸಿಕ್ಕಾಗ ಮಾತ್ರ ನಿಮ್ಮ ‘ಹಿಂದೂ ಪ್ರೀತಿ’ ಜಾಗೃತವಾಗುತ್ತಾ’ ಎಂದು ಕಾಂಗ್ರೆಸ್‌, ‘ನಯವಂಚಕ ಬಿಜೆಪಿ’ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.