ಡಾ.ಧನಂಜಯ ಸರ್ಜಿ
ಬೆಂಗಳೂರು: ‘ಹೃದಯಾಘಾತದ ಸಂದರ್ಭದಲ್ಲಿ ಇ.ಸಿ.ಜಿ ಪರೀಕ್ಷೆ ಮಾಡಲಾಗುತ್ತದೆ. ಆದರೆ ಅದು ಸ್ಪಷ್ಟವಾಗಿ ದೃಢವಾಗುವುದಿಲ್ಲ. ಹೃದಯ ಸಂಬಂಧಿ ಕಾಯಿಲೆ ಇದ್ದು, ಧೂಮಪಾನದ ಅಭ್ಯಾಸವಿದ್ದರೆ ಟಿ.ಎಂ.ಟಿ ಮಾಡಬೇಕು. ಟ್ರೋಪೋನಿನ್ ಐ ಪರೀಕ್ಷೆ ಮಾಡಲಾಗುತ್ತದೆ. ಆದರೆ, ರಾಜ್ಯದ ಯಾವ ತಾಲ್ಲೂಕು ಆಸ್ಪತ್ರೆಯಲ್ಲೂ ಅದರ ವ್ಯವಸ್ಥೆ ಇಲ್ಲ’ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಸೋಮವಾರ ವಿಧಾನ ಪರಿಷತ್ ಕಲಾಪದಲ್ಲಿ ಸರ್ಕಾರದ ಗಮನ ಸೆಳೆದರು.
‘ಹೃದಯಾಘಾತವನ್ನು ಕಂಡು ಹಿಡಿಯಲು ಇನ್ನೊಂದು ಉತ್ತಮ ಪರೀಕ್ಷೆ ಎಂದರೆ ಟ್ರೋಪೋನಿನ್ ಐ ಪರೀಕ್ಷೆ. ಹೃದಯಾಘಾತವಾದಾಗ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ನೀಡಿದರೆ ಪ್ರಾಣ ಉಳಿಸಬಹುದು. ಈ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಕೆಲವೊಂದು ತಾಲ್ಲೂಕು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ. ಹಾವೇರಿ, ಶಿರಸಿ ಮತ್ತು ಚಾಮರಾಜನಗರದಂತಹ ಜಿಲ್ಲೆಗಳಲ್ಲಿ ಸ್ಟಂಟ್ ಹಾಕುವ ವ್ಯವಸ್ಥೆ ಇಲ್ಲ. ಅದಕ್ಕಾಗಿ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ಈ ಇಂಜೆಕ್ಷನ್ ಸಿಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಆಯುಷ್ಮಾನ್ ಯೋಜನೆ ಅಡಿ ಟ್ರೋಪೋನಿನ್ ಐ ಪರೀಕ್ಷೆ ಹಾಗೂ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಎಲ್ಲ ಆಸ್ಪತ್ರೆಗಳಲ್ಲೂ ಸಿಗುವಂತೆ ಮಾಡುತ್ತೇವೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಜೊತೆಗೆ ಚರ್ಚಿಸಿ ಎಲ್ಲೆಲ್ಲಿ ಕ್ಯಾತ್ ಲ್ಯಾಬ್ ವ್ಯವಸ್ಥೆ ಬೇಕಾಗುತ್ತದೆಯೋ ಅಲ್ಲಿ ಸಿಗುವಂತೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.