ADVERTISEMENT

ಶಿವಮೊಗ್ಗ ಸೇರಿ ವಿವಿಧೆಡೆ ಮಳೆ ಅಬ್ಬರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 16:22 IST
Last Updated 19 ಏಪ್ರಿಲ್ 2024, 16:22 IST
ಶಾಸಕ ಗೋಪಾಲಕೃಷ್ಣ ಬೇಳೂರು, ಭೈರಾಪುರ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಕರಿಬಸಪ್ಪ ಅವರ ಅಡಿಕೆ ಹಾಗೂ ಬಾಳೆತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಶಾಸಕ ಗೋಪಾಲಕೃಷ್ಣ ಬೇಳೂರು, ಭೈರಾಪುರ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಕರಿಬಸಪ್ಪ ಅವರ ಅಡಿಕೆ ಹಾಗೂ ಬಾಳೆತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಶಿವಮೊಗ್ಗ: ಹಗಲೆಲ್ಲ ಬಿಸಿಲ ಝಳದ ಅಬ್ಬರ, ಸಂಜೆಯ ಹೊತ್ತಿಗೆ ಮಳೆಯ ಆರ್ಭಟ. ಇದು ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧೆಡೆ ಕಾಣಸಿಗುತ್ತಿರುವ ಚಿತ್ರಣ.

ಶಿವಮೊಗ್ಗ ನಗರದಲ್ಲಿ ಶುಕ್ರವಾರ ಸಂಜೆ ಅರ್ಧ ಗಂಟೆ ಕಾಲ ವರುಣನ ಆರ್ಭಟ ನಡೆಯಿತು. ಗುಡುಗು–ಸಿಡಿಲಿನೊಂದಿಗೆ ಬಿರುಸಿನ ಮಳೆ ಸುರಿಯಿತು. ಮಧ್ಯಾಹ್ನ ಬಿಸಿಲಿಗೆ ಕಾದು ಕೆಂ‍ಪಾಗಿದ್ದ ರಸ್ತೆ, ಗಿಡ, ಮರ, ಚರಂಡಿ, ಮನೆಯ ಚಾವಣಿ ಎಲ್ಲವೂ ಮಜ್ಜನದ ಖುಷಿ ಅನುಭವಿಸಿದವು.

ಶಿವಮೊಗ್ಗ ಮಾತ್ರವಲ್ಲ ಸಾಗರ ತಾಲ್ಲೂಕಿನ ಆನಂದಪುರ, ಶಿಕಾರಿಪುರ, ಕೋಣಂದೂರು, ಸೊರಬ, ರಿಪ್ಪನ್‌ಪೇಟೆ ಹಾಗೂ ಭದ್ರಾವತಿಯ ಸುತ್ತಮುತ್ತ ಮಳೆಯಾಗಿದೆ.

ADVERTISEMENT

ಆನಂದಪುರ ವರದಿ: ಆನಂದಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ.

ಬಿಸಿಲ ಬೇಗೆಯಿಂದ ಬಳಲಿ, ಬೆಳೆ ಕಾಪಾಡಿಕೊಳ್ಳಲು ಹಾತೊರೆಯುತ್ತಿದ್ದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಸಿಡಿಲಬ್ಬರದ ಮಳೆಯಿಂದಾಗಿ ಈಗ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. 

ಬೈರಾಪುರ ಗ್ರಾಮದ ನಿತ್ಯಾನಂದ ಅವರ ಬಾಳೆತೋಟ ಭಾರಿ ಮಳೆ ಗಾಳಿಯಿಂದಾಗಿ ನೆಲಕಚ್ಚಿದ್ದು, ಅಂದಾಜು ₹4 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಣ್ಣೂರು ಗ್ರಾಮದ ಭರ್ಮಪ್ಪ ಅವರ ಅಡಿಕೆ ತೋಟದ ಮೇಲೆ ಮರ ಬಿದ್ದು, ಬಹಳಷ್ಟು ಅಡಿಕೆ ಮರಗಳು ಮುರಿದು ಬಿದ್ದು ಸಾಕಷ್ಟು ಹಾನಿಯಾಗಿದೆ.

ಕಣ್ಣೂರಿನ ಧರ್ಮಪ್ಪ ಹಾಗೂ ಗೋಪಾಲ ಅವರ ಬಾಳೆತೋಟಕ್ಕೆ ಹಾನಿಯಾಗಿದೆ. ಬೈರಾಪುರ ಗ್ರಾಮದ ಚಂದ್ರಪ್ಪ, ವಿಠಲ ಅವರ ಬಾಳೆ ಹಾಗೂ ಅಡಿಕೆ ತೋಟಕ್ಕೂ ಹಾನಿಯಾಗಿದೆ. ಬರದ ಸಮಯದಲ್ಲಿ ಬರೆ ಎಳೆದಂತಾಗಿದೆ. ಕಣ್ಣೂರಿನ ಮಂಜಮ್ಮ ಒಂದು ಎಕರೆಯಲ್ಲಿ ಬೆಳೆದ ಜೋಳ ಸಂಪೂರ್ಣ ನೆಲಕಚ್ಚಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಮಳೆಯ ಅಬ್ಬರದಿಂದ ಹೊಸಕೊಪ್ಪ ಗ್ರಾಮದ ಯಶೋಧಮ್ಮ ಅವರ ಮನೆ ಮೇಲೆ ಮರ ಬಿದ್ದು, ಸಾಕಷ್ಟು ಹಾನಿಯಾಗಿದೆ. ಮನೆಯವರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ. ಇದಲ್ಲದೆ ಕಣ್ಣೂರು ಗ್ರಾಮದ ಪಾರ್ವತಮ್ಮ ಅವರ ಮನೆಯ ಗೋಡೆ ಕುಸಿದಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಸಕ ಗೋಪಾಲಕೃಷ್ಣ ಬೇಳೂರು, ಭೈರಾಪುರ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಕರಿಬಸಪ್ಪ ಅವರ ಅಡಿಕೆ, ಬಾಳೆತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಮಶೇಕರ್ ಲ್ಯಾವಿಗೆರೆ, ಚೇತನ್ ರಾಜ್ ಕಣ್ಣೂರ್, ಕನ್ನಪ್ಪ, ಗಿರೀಶ್ ಕೋವಿ, ಕಿರಣ್, ಶೇಖರಪ್ಪ ಇದ್ದರು.

ಹುಂಚ ರೋಡ್: ಮನೆ ಮೇಲೆ ಮರ ಬಿದ್ದು ಹಾನಿ

ಹೊಸನಗರ: ತಾಲ್ಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಚ ರೋಡ್ ನಿವಾಸಿ ಎಂ.ಪಿ.ಎಂ.ಮಂಜುನಾಥ್ ಅವರ ಮನೆ ಮತ್ತು ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ ಆಗಿದೆ.

ಗುರುವಾರ ಸಂಜೆ ಸುರಿದ ಗಾಳಿ, ಮಳೆಗೆ ಮನೆ ಪಕ್ಕದಲ್ಲಿದ್ದ ಮರ ಮನೆ ಮೇಲೆ ಬಿದ್ದಿದೆ. ಮನೆ ಕೊಟ್ಟಿಗೆಗೆ ಭಾಗಶಃ ಹಾನಿ ಸಂಭವಿಸಿದೆ. ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಹುಂಚ ರೋಡ್ ಸಮೀಪ ರಸ್ತೆ– ಇಕ್ಕೆಲಗಳಲ್ಲಿ ಅಪಾಯಕಾರಿ ಮರಗಳು ಇದ್ದು ಅವುಗಳನ್ನು ಕಡಿತಲೆ ಮಾಡಬೇಕಾಗಿದೆ. ಗಾಳಿ ಮಳೆಗೆ ಅವುಗಳು ಮನೆ ಮೇಲೆ ಬಿದ್ದು ಪ್ರತಿ ಬಾರಿಯೂ ಹಾನಿ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ದೂರು ಹಾಗೂ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಮನೆ, ಕೊಟ್ಟಿಗೆ ಕಳೆದುಕೊಳ್ಳಬೇಕಾಗಿದೆ. ಮುಂದೆ ಅಪಾಯ ಎದುರಾಗುವ ಮುನ್ನ ಅಪಾಯಕಾರಿ ಮರಗಳ ಕಡಿತಲೆ ಮಾಡಬೇಕು ಎಂದು ಮಂಜುನಾಥ್ ಅವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಮಾಡಿದ್ದಾರೆ.

ಕಣ್ಣೂರಿನ ಮಂಜಮ್ಮ ಅವರು ಒಂದು ಎಕರೆಯಲ್ಲಿ ಬೆಳೆದ ಜೋಳ ಸಂಪೂರ್ಣ ನೆಲಕಚ್ಚಿರುವುದು
ಹೊಸನಗರ ತಾಲ್ಲೂಕು ಹುಂಚಾರೋಡ್ ನಿವಾಸಿ ಮಂಜುನಾಥ್ ಅವರ ಮನೆ ಮೇಲೆ ಮರ ಬಿದ್ದು ಹಾನಿ ಆಗಿದೆ
ಶಿವಮೊಗ್ಗದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಶುಕ್ರವಾರ ಮಳೆಯ ನಡುವೆ ಯುವತಿಯರು ಕೊಡೆ ಹಿಡಿದು ಸಾಗಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.