ADVERTISEMENT

ಧಾರಾಕಾರ ಮಳೆಗೆ ನಲುಗಿದ ಮಲೆನಾಡು

ಶಿವಮೊಗ್ಗ ನಗರದ ಹಲವೆಡೆ ಮನೆಗಳಿಗೆ ನುಗ್ಗಿದ ನೀರು, ಭಾರಿ ಹಾನಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:30 IST
Last Updated 6 ಆಗಸ್ಟ್ 2019, 19:30 IST
ಶಿವಮೊಗ್ಗ ಗಾಜನೂರು ಜಲಾಶಯದಿಂದ ಹೊರಬಿಡಲಾದ ನೀರಿನ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು.
ಶಿವಮೊಗ್ಗ ಗಾಜನೂರು ಜಲಾಶಯದಿಂದ ಹೊರಬಿಡಲಾದ ನೀರಿನ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು.   

ಶಿವಮೊಗ್ಗ: ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ನಗರದ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕೆಲವೆಡೆ ಮನೆ ಗೋಡೆಗಳು ಕುಸಿದು ಜನರು ಸಂಕಷ್ಟಕ್ಕೀಡಾಗಿದ್ದಾರೆ.

ನಗರದ ಆರ್.ಎಂ.ಎಲ್. ನಗರ, ಬಾಪೂಜಿನಗರ, ಟಿಪ್ಪುನಗರ ಬಸವನಗುಡಿ, ಟ್ಯಾಂಕ್ ಮೊಹಲ್ಲಾ, ಅಂಗಳಯ್ಯನ ಕೇರಿ, ಹೊಸಮನೆ, ವೆಂಕಟೇಶ ನಗರ, ವಿದ್ಯಾನಗರ, ಜಗದಾಂಬ ಬಡಾವಣೆ, ಸೀಗೆಹಟ್ಟಿ, ಒಡ್ಡಿನಕೊಪ್ಪ, ಗೋಪಾಲಗೌಡ ಬಡಾವಣೆ ಹೀಗೆ ಹಲವೆಡೆ ತಗ್ಗು ಪ್ರದೇಶದ ಮನೆ, ರಸ್ತೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳಿಗೆ ತೊಂದರೆಯಾಗಿದೆ. ಚರಂಡಿಗಳೆಲ್ಲಾ ತುಂಬಿ ಹರಿಯುತ್ತಿವೆ.ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ಬಾಪೂಜಿ ನಗರ, ಆರ್‌ಎಂಎಲ್‌ ನಗರದಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿರುವ ಪರಿಣಾಮಸವಾರರು ಸಂಕಷ್ಟಕ್ಕೀಡಾಗಿದ್ದಾರೆ.

ವೆಂಕಟೇಶ್ ನಗರದಲ್ಲಿ 20ಕ್ಕೂ ಅಧಿಕ ಮನೆಗಳಿಗೆ, ಜಗದಾಂಬ ಬಡಾವಣೆಗಳಲ್ಲಿ 5 ಮನೆ, ಟ್ಯಾಂಕ್ ಮೊಹಲ್ಲಾದಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆಲವೆಡೆ ಮನೆಗಳ ಚಾವಣಿ ಬಿದ್ದಿದ್ದು, ಮನೆಯಲ್ಲಿ ಇದ್ದ ಪೀಠೋಪಕರಣಗಳು ಮತ್ತು ದಿನಬಳಕೆ ವಸ್ತುಗಳು ಹಾಳಾಗಿವೆ. ಕೆಲ ಚರಂಡಿಗಳು ಬ್ಲಾಕ್ ಆಗಿರುವುದರಿಂದ ರಸ್ತೆಯ ಮೇಲೆ ನೀರು ಹರಿದು ಮನೆಗಳಿಗೆ ನುಗ್ಗುತ್ತಿವೆ.ಸೀಗೆಹಟ್ಟಿಯ ಮಂಡಕ್ಕಿಬಟ್ಟಿ ಹಾಗೂ ಸುತ್ತ ಮುತ್ತ ಪ್ರದೇಶಗಳಿಗೆ ನೀರು ನುಗಿದ್ದು, ಕೆಲವು ಮನೆಗಳು ಈಗಾಗಲೇ ಜಲಾವೃತವಾಗಿದೆ.

ADVERTISEMENT

20 ನೇ ವಾರ್ಡಿನ ಹೊಸಮನೆ ಬಡಾವಣೆಯ ಅಂಬೇಡ್ಕರ್ ಸಮುದಾಯ ಭವನದ ಪಕ್ಕದಲ್ಲಿರುವ ಲಕ್ಷ್ಮಮ್ಮ ಎಂಬುವರ ಮನೆ ಮಳೆಯ ರಭಸಕ್ಕೆ ಬಿದ್ದು ಹೋಗಿದೆ. ಬಸವನಗುಡಿಯ 3ನೇ ಕ್ರಾಸ್‌ನಲ್ಲಿ ಹೆರಿಗಪ್ಪ ಹಾಗೂ 6ನೇ ಕ್ರಾಸ್‌ನಲ್ಲಿ ಗಾಡಿ ರಾಮಣ್ಣ ಎಂಬು ಕೂಲಿ ಕಾರ್ಮಿಕರ ಮನೆ ಗೋಡೆ ಕುಸಿದಿವೆ. ಬಾಪೂಜಿನಗರದಲ್ಲಿ ಮಳೆ ನೀರು ಸರಾಗವಾಗಿ ಹರಿಯದ ಕಾರಣ ಅಲ್ಲಿನ ರಾಜಕಾಲುವೆಯ ಸೇತುವೆಯನ್ನು ಸ್ಥಳೀಯರು ಒಡೆದುಹಾಕಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಿದ್ದಾರೆ. ಈ ಸೇತುವೆಯನ್ನು ಅಮೃತ್‌ ಯೋಜನೆಯಡಿ ನಿರ್ಮಿಸಲು ತೀರ್ಮಾನಿಸಲಾಗಿದೆ.

ನಗರದ ವಾತ್ಸಲ್ಯ ಆಸ್ಪತ್ರೆ ಸಮೀಪ, ಆರ್‌ಟಿಓ ಕಚೇರಿ ರಸ್ತೆ ಮರದ ಕೊಂಬೆಗಳು ಮುರಿದು ಬಿದ್ದು, ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೆಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರಿಳಿವೆ.ಶಿವಮೊಗ್ಗ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಕೋಳಿ ಫಾರಂಗೆ ನೀರು ನುಗ್ಗಿ ಸುಮಾರು 3 ಸಾವಿರ ಕೋಳಿಗಳು ಸಾವನ್ನಪ್ಪಿವೆ.

ಟಿಪ್ಪುನಗರದ ನೆರೆ ಹಾನಿ ಪ್ರದೇಶ, ರಾಮಿನಕೊಪ್ಪ ಸೇರಿದಂತೆ ವಿವಿಧೆಡೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಾಸಕ ಕೆ.ಎಸ್.ಈಶ್ವರಪ್ಪ ಸಹ ಬಾಪೂಜಿನಗರ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಹಶೀಲ್ದಾರ್‌ ಗಿರೀಶ್‌ ಅಗತ್ಯ ಬಿದ್ದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನೂ ಬಿದ್ದುಹೋಗಿರುವ ಮನೆಗಳನ್ನು ಶೀಘ್ರವೇ ಕಟ್ಟಿಕೊಡಬೇಕು ಹಾಗೂ ಸಂತ್ರಸ್ಥರಿಗೆ ಕೂಡಲೇ ಪರಿಹಾರ ನೀಡಬೇಕು ಎಂದುಜನರುಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.