ಸಾಗರ: ಹೆಗ್ಗೋಡಿನ ನೀನಾಸಂ ಸಂಸ್ಥೆಯ ಶಿವರಾಮ ಕಾರಂತ ರಂಗಮಂದಿರ 70ರ ದಶಕದಲ್ಲಿ ನಿರ್ಮಾಣವಾಗಿದೆ. ಅದರ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಹಂತ ಹಂತವಾಗಿ ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದರು.
ಸಮೀಪದ ಹೆಗ್ಗೋಡಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನೀನಾಸಂ ಸಂಸ್ಥೆಯ ನವೀಕರಿಸಿದ ಆಪ್ತ ರಂಗಮಂದಿರ, ನೀನಾಸಂ ನಾಟಕೋತ್ಸವ, ಬೇಸಿಗೆ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವರಾಮ ಕಾರಂತ ರಂಗಮಂದಿರದ ಪುನರ್ ನಿರ್ಮಾಣಕ್ಕೆ ₹ 1 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈ ವರ್ಷವೇ ಮೊದಲ ಹಂತದ ಅನುದಾನ ಬಿಡುಗಡೆ ಮಾಡಲಾಗುವುದು. ಕಲೆ, ಸಂಸ್ಕೃತಿಗೆ ಸಂಬಂಧಪಟ್ಟ ಚಟುವಟಿಕೆಗಳಿಗೆ ನೆರವು ನೀಡುವಲ್ಲಿ ರಾಜ್ಯ ಸರ್ಕಾರ ಯಾವತ್ತೂ ಹಿಂದೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಂಗಭೂಮಿ ರಂಜನೆಯ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವ ಕೆಲಸವನ್ನು ಮಾಡುವ ಮೂಲಕ ನೀನಾಸಂ ಅರಿವಿನ ದಾರಿಯನ್ನು ತೋರುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ರಾಜ್ಯದಾದ್ಯಂತ ರಂಗಭೂಮಿಯಲ್ಲಿ ಆಸಕ್ತಿ ಇರುವ ಯುವ ಕಲಾವಿದರಿಗೆ ನೀನಾಸಂ ರಂಗ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯಕ್ಕೆ ಶ್ರಮಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.
ಸರ್ಕಾರದಿಂದ ಕಡಿಮೆ ಅನುದಾನ ಪಡೆದು ರಂಗಭೂಮಿ ಕ್ಷೇತ್ರದಲ್ಲಿ ದೊಡ್ಡ ಕೆಲಸ ಮಾಡುತ್ತಿರುವ ರಾಜ್ಯದ ಕೆಲವೇ ಸಂಸ್ಥೆಗಳ ಪೈಕಿ ನೀನಾಸಂ ಕೂಡ ಒಂದಾಗಿದೆ. ಇಂತಹ ಸಂಸ್ಥೆಗಳಿಗೆ ಕೊಡುವ ಅನುದಾನ ಸದ್ವಿನಿಯೋಗವಾಗುತ್ತದೆ ಎಂಬ ನಂಬಿಕೆ ಸರ್ಕಾರಕ್ಕೆ ಇದೆ ಎಂದು ತಿಳಿಸಿದರು.
‘ಒಂದು ಸಣ್ಣ ಗ್ರಾಮದಲ್ಲಿ ಆರಂಭಗೊಂಡ ನೀನಾಸಂ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕೆ.ವಿ.ಸುಬ್ಬಣ್ಣ ಅವರ ಚಿಂತನೆ ಕಾರಣ. ಅವರ ಕೊಡುಗೆಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
‘ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಸ್ಥಾನಕ್ಕೆ ಏರಿದವರು ತಾವು ಶಿಕ್ಷಣ ಪಡೆದ ಶಾಲೆಗಳಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡುತ್ತಿದ್ದಾರೆ. ಅದೇ ಮಾದರಿಯಲ್ಲಿ ನೀನಾಸಂನಲ್ಲಿ ರಂಗ ತರಬೇತಿ ಪಡೆದು ಚಲನಚಿತ್ರ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವವರು ನೀನಾಸಂಗೆ ನೆರವು ನೀಡಬೇಕು’ ಎಂದು ಅವರು ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಯಾವುದೇ ಕ್ಷೇತ್ರಕ್ಕೆ ನೀಡುವ ಅನುದಾನಕ್ಕೆ ಸರ್ಕಾರ ಕೊರತೆ ಮಾಡಿಲ್ಲ ಎಂದರು.
‘1980ರಿಂದ ಈವರೆಗೆ ನೀನಾಸಂ ರಾಜ್ಯ ಸರ್ಕಾರದಿಂದ ₹ 8.5 ಕೋಟಿ, ಕೇಂದ್ರ ಸರ್ಕಾರದಿಂದ ₹ 5 ಕೋಟಿ ಅನುದಾನ ಪಡೆದಿದೆ. ಪಡೆದಿರುವ ಹಣವನ್ನು ಅದ್ದೂರಿ ಕಾರ್ಯಗಳಿಗೆ ಬಳಸದೆ ಕಡಿಮೆ ವೆಚ್ಚದಲ್ಲಿ ಅರ್ಥಪೂರ್ಣ ಕೆಲಸಗಳಿಗೆ ಬಳಸಲಾಗುತ್ತಿದೆ’ ಎಂದು ನೀನಾಸಂನ ಕೆ.ವಿ. ಅಕ್ಷರ ಮಾಹಿತಿ ನೀಡಿದರು.
ನೀನಾಸಂ ಸಂಸ್ಥೆಯ ಅಧ್ಯಕ್ಷ ಸಿದ್ದಾರ್ಥ ಭಟ್, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಇದ್ದರು.
ಭಾರ್ಗವ ಬೇದೂರು, ಅರುಣ್ ಕುಮಾರ್ ಪ್ರಾರ್ಥಿಸಿದರು. ಮಾಧವ ಚಿಪ್ಪಳಿ ನಿರೂಪಿಸಿದರು. ಎಂ.ಗಣೇಶ್ ನಿರ್ದೇಶನದಲ್ಲಿ ‘ಮದರ್ ಕರೇಜ್ ಮತ್ತು ಅವಳ ಮಕ್ಕಳು’ ನಾಟಕವನ್ನು ನೀನಾಸಂ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದರು.
‘ಜಿಲ್ಲಾ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೂ ಅನುದಾನ ಅಗತ್ಯ’
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ರಾಜ್ಯ ಸರ್ಕಾರ ಅನುದಾನ ನೀಡುತ್ತಿದೆ. ಆದರೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆಯುವ ಸಮ್ಮೇಳನಗಳಿಗೂ ಸರ್ಕಾರ ಅನುದಾನ ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಚಿವ ಶಿವರಾಜ ತಂಗಡಗಿ ಅವರಲ್ಲಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.