ADVERTISEMENT

ರಾಮನಸರ | ಹೆಮ್ಮಾಡಿ ಶಾಂತರಸ ಕಾಲದ ಶಾಸನ ಪತ್ತೆ

ಇತಿಹಾಸ ಸಂಶೋಧಕ ಗಣೇಶ್ ಅವರ ಕಾರ್ಯ, ಸ್ಥಳೀಯರ ನೆರವು

ಹೊಸಕೊಪ್ಪ ಶಿವು
Published 9 ಡಿಸೆಂಬರ್ 2024, 6:46 IST
Last Updated 9 ಡಿಸೆಂಬರ್ 2024, 6:46 IST
<div class="paragraphs"><p>ಕೋಣಂದೂರು ಸಮೀಪದ ರಾಮನಸರ ಗ್ರಾಮದ ಕಾಡಿನಲ್ಲಿ ಈಚೆಗೆ ಪತ್ತೆಯಾದ ಹೆಮ್ಮಾಡಿ ಶಾಂತರಸನ ಶಾಸನ</p><p></p></div>

ಕೋಣಂದೂರು ಸಮೀಪದ ರಾಮನಸರ ಗ್ರಾಮದ ಕಾಡಿನಲ್ಲಿ ಈಚೆಗೆ ಪತ್ತೆಯಾದ ಹೆಮ್ಮಾಡಿ ಶಾಂತರಸನ ಶಾಸನ

   

ಕೋಣಂದೂರು: ಜೈನರ ಪವಿತ್ರ ಕ್ಷೇತ್ರ ಹುಂಚಾ (ಹೊಂಬುಜ)ಗೆ ಸಂಬಂಧಿಸಿದ ಹೆಮ್ಮಾಡಿ ಶಾಂತರಸನ (ಸಾನ್ತರ) ಶಾಸನ ಸಮೀಪದ ರಾಮನಸರ ಗ್ರಾಮದ ಕಾಡಿನಲ್ಲಿ ಈಚೆಗೆ ಪತ್ತೆಯಾಗಿದೆ.

ADVERTISEMENT

ವೀರಗಲ್ಲಿನ ರೂಪದಲ್ಲಿರುವ ಈ ಶಾಸನ 2 ಅಡಿ ಅಗಲ 4 ಅಡಿ ಉದ್ದ ಇದೆ.

ಇದನ್ನು ಪೂರ್ವಾಭಿಮುಖವಾಗಿ ನೆಡಲಾಗಿದೆ. ಶಾಸನವನ್ನು ಕರಿಕಲ್ಲಿನಲ್ಲಿ ಕೆತ್ತಲಾಗಿದೆ.

13 ಸಾಲಿನ ಶಾಸನ ಇದಾಗಿದ್ದು, ಶಾಸನವು ಶಕವರ್ಷ 1054 ವಿರೋಧಿಕೃತ ಸಂವತ್ಸರದಲ್ಲಿ ರಚಿಸಲಾಗಿದೆ. ಈ ದಿನಾಂಕ ಕ್ರಿ.ಶ. 1132ಕ್ಕೆ ಸರಿ ಹೊಂದುತ್ತದೆ ಎನ್ನುತ್ತಾರೆ ಸಂಶೋಧಕ ಕೋಣಂದೂರು ಕೆ.ಎನ್.ಗಣೇಶ್.

ಶಾಸನ ಹೊಂಬುಜದ ಸಾನ್ತರ ಮನೆತನದ ಹೆಮ್ಮಾಡಿ ಶಾಂತರಸನ ಆಡಳಿತವನ್ನು ಉಲ್ಲೇಖಿಸುತ್ತದೆ. ಅವನ ಗುಣಗಾನವಿದೆ.

ಶಾಸನದ ವಿವರ: ‘ಹೊಂಬುಜದ ಪದ್ಮಾವತಿ ದೇವಿಯ ಪ್ರಸಾದದಿಂದ ಜನಿಸಿದ ಹೆಮ್ಮಾಡಿ ಶಾಂತರಸ ಬಹುಪರಾಕ್ರಮಿಯಾಗಿದ್ದ. ಶತ್ರು ಗಳಿಗೆ ಸಿಂಹಸ್ವಪ್ನನೂ, ಸಾಂತರ ಕುಲಕ್ಕೆ ಮೇರು ಪರ್ವತವೂ, ಚಂಡಾಟದಲ್ಲಿ ಆಚಾರ್ಯನೂ, ಧೈರ್ಯವಂತನೂ, ಬಿರುದಬೇರುಂನೂ, ಕೀರ್ತಿಗೆ ನಾರಾಯಣನೂ, ಸಾನ್ತರ ಕುಲಕ್ಕೆ ಸೂರ್ಯನೂ, ಬಹುಜನರಿಂದ ಹೊಗಳಿಸಿಕೊಂಡವನೂ, ರಾಜ ನೀತಿಶಾಸ್ತ್ರದಲ್ಲಿ ಪರಿಣತನೂ’ ಎಂಬುದಾಗಿ ಶಾಸನದಲ್ಲಿ ಆತನ ಗುಣಗಾನವಿದೆ ಎಂದು ಅವರು ವಿವರಿಸಿದರು.

ಕ್ರಿ.ಶ. 1054ರಲ್ಲಿ ನಡೆದ ಕಾಳಗದಲ್ಲಿ ಹೆಮ್ಮಾಡಿ ಶಾಂತರಸನ ನೆಚ್ಚಿನ ಸೇನಾನಿಯಾಗಿದ್ದ ಸಿರಿಯಣ್ಣ ವೀರ ಮರಣ ಅಪ್ಪುತ್ತಾನೆ. ಈ ವೀರನ ಕುಟುಂಬಕ್ಕೆ ಒಂದು ಕೆಯ್ಯಿ (ಅಳತೆಯ ಪ್ರಮಾಣ) ಕಾವಲಿನ ಸುಂಕ ದಾನ ನೀಡಲಾಗುತ್ತದೆ ಎಂಬ ಉಲ್ಲೇಖವಿದೆ.

ಹಂಪ ನಾಗರಾಜಯ್ಯ ಅವರು ಹೊಂಬುಜದ ಶಾಂತರಸನ ಮನೆತನದ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿದ್ದಾರೆ.

ಅದರಲ್ಲಿ ಹೆಮ್ಮಾಡಿ ಸಾನ್ತರ ಉಲ್ಲೇಖವಿಲ್ಲ. ಅಜ್ಞಾತವಾಗಿದ್ದ ಒಬ್ಬ ಅರಸನನ್ನು ರಾಮನಸರದ ವೀರಗಲ್ಲು ಪರಿಚಯಿಸಿದೆ ಎಂದು ಗಣೇಶ್‌ ಮಾಹಿತಿ ನೀಡಿದರು.

ಕೋಣಂದೂರು ಸುತ್ತ ಅನೇಕ ಶಿಲಾ ಶಾಸನಗಳು ಪತ್ತೆಯಾಗಿವೆ. ಅವುಗಳ ಅಧ್ಯಯನ ಅಗತ್ಯ. ಈಚೆಗೆ ಕೋಣಂದೂರು ಸಮೀಪದ ಅಗ್ರಹಾರ ರಸ್ತೆಯಲ್ಲಿ ವಿಶಿಷ್ಟ ಬಗೆಯ ಬಾವಿ ಪತ್ತೆಯಾಗಿದ್ದು, ಅದರ ಬಗ್ಗೆಯೂ ಸಂಶೋಧನೆ ನಡೆಯಬೇಕಿದೆ. ಸ್ಥಳೀಯ ಇತಿಹಾಸವನ್ನು ತಿಳಿಯಲು ಸಂಶೋಧಕರಿಗೆ ಪ್ರೋತ್ಸಾಹ ನೀಡಬೇಕು ಎಂದು ಗಣೇಶ್‌ ಅವರಿಗೆ ಸಹಕಾರ ನೀಡಿದ ಸ್ಥಳೀಯರಾದ ಸುರೇಶ್, ಗಣೇಶ್ ಮಂಗಳ, ವಿಜಯ್ ಆಗ್ರಹಿಸುತ್ತಾರೆ.

‘ಹೆಮ್ಮಾಡಿ ಶಾಂತರಸನ ಉಲ್ಲೇಖವಿರುವ ನೂತನ ಶಾಸನ ಕೋಣಂದೂರು ಸಮೀಪದ ರಾಮನಸರ ದಲ್ಲಿ ದೊರೆತ ವಿಷಯ ತಿಳಿದು ಸಂತೋಷವಾಗಿದೆ. ಹೊಂಬುಜದ ಶಾಂತರಸರು ಈ ಭಾಗದಲ್ಲಿ ಸಾವಿರ ವರ್ಷ ಆಡಳಿತ ನಡೆಸಿದ್ದರು. ಅವರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿದ್ದು, ಈ ಶಾಸನ ಒಂದು ಹೊಸ ಸೇರ್ಪಡೆ. ಗಣೇಶ್ ಅವರ ಕಾರ್ಯ ಶ್ಲಾಘನೀಯ’ ಎಂದು ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.