ADVERTISEMENT

ಎಲ್ಲ ಜಾತಿ ಒಟ್ಟಾದರೆ ಹಿಂದೂ ಧರ್ಮ ಗಟ್ಟಿ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಕನಕದಾಸ ಜಯಂತಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 8:26 IST
Last Updated 28 ನವೆಂಬರ್ 2021, 8:26 IST
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕನದಾಸ ಜಯಂತಿ ಮಹೋತ್ಸವದ ಉದ್ಘಾಟನೆಯನ್ನು ಸ್ವಾಮೀಜಿಗಳು ನೆರವೇರಿಸಿದರು.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕನದಾಸ ಜಯಂತಿ ಮಹೋತ್ಸವದ ಉದ್ಘಾಟನೆಯನ್ನು ಸ್ವಾಮೀಜಿಗಳು ನೆರವೇರಿಸಿದರು.   

ಶಿವಮೊಗ್ಗ: ಎಲ್ಲ ಜಾತಿಗಳು ಒಟ್ಟಾದರೆವಿಶ್ವದ ಸನಾತನ ಹಿಂದೂ ಧರ್ಮ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಪಾದಿಸಿದರು.

ಸನಾತನ ಹಿಂದೂ ಸಮಾಜ ಪರಿಷತ್ ಕುವೆಂಪು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನದಾಸ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಸನಾತನ ಹಿಂದೂ ಧರ್ಮದ ಪುಣ್ಯಭೂಮಿ ಭಾರತ. ಇಲ್ಲಿನ ದಾರ್ಶನಿಕರೆಲ್ಲರೂ ಹಿಂದೂ ಧರ್ಮದ ತಳಹದಿಯ ಮೇಲೆ ಕೆಲಸ ಮಾಡಿದ್ದಾರೆ. ಎಲ್ಲಾ ಗುರು ಪೀಠಗಳು ತಮ್ಮ ಸಿದ್ಧಾಂತಗಳನ್ನು ವೈಭವೀಕರಿಸಿದ್ದರೂ ಎಲ್ಲ ಸಿದ್ಧಾಂತಗಳಿಗೂ ಹಿಂದೂ ಧರ್ಮವೇ ತಳಹದಿ. ಇಂತಹ ಸನಾತನ ಹಿಂದೂ ಧರ್ಮವನ್ನು ಮತ್ತಷ್ಟು ಗಟ್ಟಿಗೊಳಿಸಲು ಎಲ್ಲರೂ ಒಂದಾಗಬೇಕಿದೆ ಎಂದರು.

ADVERTISEMENT

ಕೈಯಲ್ಲಿರುವ ಬೆರಳು ವಿಭಿನ್ನ ರೂಪ ಪಡೆದುಕೊಂಡಿದ್ದರೂ ಎಲ್ಲ ಬೆರಳುಗಳನ್ನು ಸೇರಿಸಿ ಮುಷ್ಠಿ ಮಾಡಿದರೆ ಅದಕ್ಕೆ ಶಕ್ತಿ ಬರುತ್ತದೆ. ಹಾಗೆಯೇ ಎಲ್ಲಾ ಜಾತಿಗಳ ಗುರುಪೀಠಗಳು, ಮಠಗಳು ಇಲ್ಲಿವೆ. ಆಚಾರ–ವಿಚಾರ ವೇಷಭೂಷಣಗಳು ಭಿನ್ನತೆಯಿಂದ ಕೂಡಿವೆ. ಅವೆಲ್ಲವೂ ಒಟ್ಟಾದಾಗ ಸನಾತನ ಹಿಂದೂ ಧರ್ಮ ವಿಜೃಂಭಿಸುತ್ತದೆ. ಇಲ್ಲದೇ ಹೋದರೆ ಹಿಂದೂ ಧರ್ಮ ದುರ್ಬಲವಾಗುವ ಸಾಧ್ಯತೆ ಇದೆ. ಯಾರೂ ಹಿಂದೂ ಧರ್ಮ ಮರೆಯಬಾರದು. ಇಡೀ ಮಾನವ ಸಮುದಾಯಕ್ಕೆ ಬೆಳಕು ನೀಡುವ ಧರ್ಮದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ‘ಕನ್ನಡಿಯಲ್ಲಿ ದೂಳು ಕುಳಿತರೆ ಪ್ರತಿಬಿಂಬ ನೋಡಿಕೊಳ್ಳುವುದು ಅಸಾಧ್ಯ. ಹಾಗೆಯೇ ಧರ್ಮಗಳು ಕೂಡ ದೂಳು ಹಿಡಿಯುತ್ತಿವೆ.ಇಂದು ಮನುಷ್ಯನ ಮನಸು ಕಲುಷಿತಗೊಂಡಿದೆ. ಧರ್ಮವೂ ಕಲುಷಿತವಾಗಬಾರದು. ನುಡಿದಂತೆ ನಡೆಯಬೇಕು ಎನ್ನುವುದು ಕನಕದಾಸರ ಸಂದೇಶ. ಅವರು ಎಂದಿಗೂ ಜಾತಿಗೆ ಸೀಮಿತರಾದವರಲ್ಲ. ಭಕ್ತಿ ಮತ್ತು ಸತ್ಯಗಳಿಂದ ತಮ್ಮದೇ ಆದ ಸರಳ ಭಾಷೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದವರು. ಅವರ ಆದರ್ಶಗಳನ್ನು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ‘ಕನಕದಾಸರು ಭಕ್ತಿಯಿಂದ ಭಗವಂತನನ್ನು ಕಾಣಲು ಹೊರಟವರು. ಭಕ್ತಿಯೇ ಭಗವಂತನ ಕಾಣುವ ಶಕ್ತಿ ಎಂದು ಪ್ರತಿಪಾದಿಸಿದ ಅವರು ಮೌಢ್ಯದ ವಿರುದ್ಧವೂ ಹೋರಾಡಿದವರು. ಪರಮಾತ್ಮನನ್ನೇ ತಮ್ಮತ್ತ ತಿರುಗಿಸಿಕೊಂಡರು. ಕನಕದಾಸರ ಭಕ್ತಿ ಇಡೀ ಜಗತ್ತಿಗೇ ಹೆಸರಾಗಿದೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ, ‘ಕನಕದಾಸರು ಶ್ರೇಷ್ಠ ಸಂತರು. ದಾಸಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಅವರ ಅನುಭವದ ಹಾಡುಗಳು ಅಧ್ಯಾತ್ಮದಿಂದ ಕೂಡಿವೆ. ಭಕ್ತಿ ಸಂಪಾದಿಸಲು ಸುಲಭದ ಹಾಡುಗಳಾಗಿವೆ. ಸರಳ ಭಜನೆಗಳ ಮೂಲಕ ಕನಕದಾಸರು ಸಮಸ್ತ ಸಮಾಜದ ಅಮೂಲ್ಯ ಆಸ್ತಿಯಾಗಿದ್ದಾರೆ. ಅವರನ್ನು ಜಾತಿಗೆ ಸೀಮಿತಗೊಳಿಸಬಾರದು. ಅವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕನಕದಾಸರ ಕೃತಿಗಳ ಸಮೂಹ ಗಾಯನ ನಡೆಯಿತು. ನಗರದ ಭಜನಾ ಮಂಡಳಿಗಳ ಮಾತೆಯರು ಕೀರ್ತನೆಗಳನ್ನು ಹಾಡಿದರು. ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಕೆ.ಇ. ಕಾಂತೇಶ್, ಡಾ. ದಿಲೀಪ್ ಕುಮಾರ್ ಪಾಂಡೆ, ರಮೇಶ್ ಬಾಬು, ಸುನಿತಾ ಅಣ್ಣಪ್ಪ, ಸೋಮಸುಂದರ್, ನವುಲೆ ಈಶ್ವರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.