
ಕಾರ್ಗಲ್: ಸಾಗರ ತಾಲ್ಲೂಕಿನ ಗಡಿ ಭಾಗದಲ್ಲಿ ನೆಲೆಗೊಂಡಿರುವ ಹೊಗೆವಡ್ಡಿ ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ಮಲೆನಾಡು ಮತ್ತು ಕರಾವಳಿಯ ಭಕ್ತರ ಬೆಸುಗೆಯ ಕೊಂಡಿಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಹೊಗೆವಡ್ಡಿ ಶ್ರೀ ಕ್ಷೇತ್ರದಲ್ಲಿ ಶನಿವಾರ ನಡೆದ 10 ನೆ ವರ್ಷದ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದಟ್ಟ ಕಾನನದ ನಡುವೆ ಪಾಳೆಗಾರ ಉಗ್ರಾಣಿಮನೆ ತಿಮ್ಮಣ್ಣ ನಾಯ್ಕರ ಆರಾಧ್ಯದೈವವಾಗಿದ್ದ ಕೋಟೆ ಶ್ರೀ ವೀರಾಂಜನೇಯ ದೇವರ ಕ್ಷೇತ್ರವನ್ನು ಈ ಭಾಗದ ಭಕ್ತರ ಸಹಕಾರದೊಂದಿಗೆ ತಿಮ್ಮಣ್ಣ ನಾಯ್ಕರು ಅಭಿವೃದ್ಧಿ ಪಡಿಸುತ್ತಾ ಬಂದಿದ್ದು, ಪ್ರಸಕ್ತ ಇಲ್ಲಿಗೆ ವಿಶೇಷ ಪೂಜಾ ದಿನಗಳಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಇಲ್ಲಿ ನಡೆಯುವ ಪೂಜೆ ಮತ್ತು ದರುಶನ ಕಾರ್ಯಕ್ರಮಗಳಿಂದ ಆಕರ್ಷಿತರಾಗಿ ಆಗಮಿಸುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಬಗ್ಗೆ ಗಮನಹರಿಸಿದ್ದು ಹೊಗೆವಡ್ಡಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತಾಲ್ಲೂಕು ಆಡಳಿತದಿಂದ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಹೊಗೆವಡ್ಡಿ ಶ್ರೀ ಕ್ಷೇತ್ರದ ಧರ್ಮದರ್ಶಿ ತಿಮ್ಮಣ್ಣನಾಯ್ಕ ಮಾತನಾಡಿ ಫೆ.12 ರಿಂದ ಫೆ14 ರವರೆಗೆ ಅತ್ಯಂತ ಯಶಸ್ವಿಯಾಗಿ ಜಾತ್ರೋತ್ಸವವನ್ನು ನಡೆಸಲಾಯಿತು. ಭಕ್ತರಿಗೆ ಮುಕ್ತವಾಗಿ ಗರ್ಭಗುಡಿ ಪ್ರವೇಶ ಮತ್ತು ದೇವರಿಗೆ ಅಭಿಷೇಕ ಮಾಡಲು ಇಲ್ಲಿನ ದೇವಸ್ಥಾನದಲ್ಲಿ ಅವಕಾಶ ನೀಡಿರುವುದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಇದಲ್ಲದೇ ಜಾತ್ರಾ ಸಂಧರ್ಭದಲ್ಲಿ ಕರೂರು ಭಾರಂಗಿ ಹೋಬಳಿ ಮತ್ತು ಭಟ್ಕಳ ತಾಲ್ಲೂಕಿನ ಶಾಲಾ ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಮಹಿಳೆಯರಿಗೆ ವಿವಿಧ ಆಟೋಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಶಾಲಾ ಮಕ್ಕಳಿಗೆ ಶೈಕ್ಷಣಿಕವಾಗಿ ಮತ್ತು ಸಾರ್ವಜನಿಕರಿಗೆ ಸಾಮಾಜಿಕವಾಗಿ ಅನುಕೂಲವಾಗುವ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದು ಅವರು ತಿಳಿಸಿದರು.
ಈ ಜಾತ್ರೋತ್ಸವದಲ್ಲಿ 3 ದಿನಗಳ ಕಾಲ ದಾವಣಗೆರೆಯ ಭಕ್ತಾದಿಗಳು ಆಗಮಿಸಿ ಭಕ್ತಾದಿಗಳಿಗೆ ಉಚಿತವಾಗಿ ದಾವಣಗೆರೆ ಬೆಣ್ಣೆದೋಸೆಯನ್ನು ವಿತರಣೆ ಮಾಡಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.