ADVERTISEMENT

ಹೋಂ ಕ್ವಾರಂಟೈನ್‌ ಉಲ್ಲಂಘನೆ: ನಾಲ್ವರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 14:07 IST
Last Updated 7 ಏಪ್ರಿಲ್ 2020, 14:07 IST

ಶಿವಮೊಗ್ಗ: ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಸೊರಬ ಪಟ್ಟಣದ ಮೂವರು ಸೇರಿ ತಾಲ್ಲೂಕಿನ ಒಟ್ಟು ನಾಲ್ವರನ್ನು ಮಾಸ್ ಕ್ವಾರಂಟೈನ್‌ಗಾಗಿ ಮಂಗಳವಾರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಟ್ಟಣದ ಮುಖ್ಯ ರಸ್ತೆಯ ನಿವಾಸಿ ದಿನಸಿ ವ್ಯಾಪಾರಿಯೊಬ್ಬರ ಪುತ್ರ ಪುನೀತ್, ಅವರ ಪತ್ನಿ ಪ್ರಿಯಾಂಕ ಹಾಗೂ ಸುಮಾರು 3 ವರ್ಷದ ಪುತ್ರಿಯನ್ನು ಮಾಸ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಬೆಂಗಳೂರಿನಿಂದ ಬಂದ ಅವರು ಕೊರೊನಾ ವೈರಸ್ ತಡೆ ಮತ್ತು ನಿಯಂತ್ರಣ ವಿಷಯದಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪಕ್ಕೆ ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪಿಎಸ್‌ಐ ಪ್ರಶಾಂತ್ ಕುಮಾರ್, ಟಿ.ಬಿ. ಪ್ರಶಾಂತ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಕ್ಷತಾ ಖಾನಾಪುರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗದೀಶ್ ನಾಯ್ಕ್, ಆರೋಗ್ಯ ಶಿಕ್ಷಣಾಧಿಕಾರಿ ಅರುಂಧತಿ ಕಾಳೆ, ಹಿರಿಯ ಆರೋಗ್ಯ ಸಹಾಯಕ ಇಂಧೂದರ ಪಾಟೀಲ್ ಇದ್ದರು.

ADVERTISEMENT

ಸೊರಬ ತಾಲ್ಲೂಕಿನ ಶಕುನವಳ್ಳಿ ಗ್ರಾಮದ ಶಿವಪ್ಪ ಹನುಮಂತಪ್ಪ ಕುಸುನೂರು ಎಂಬಾತ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಶಿವಮೊಗ್ಗದ ಮೆಗ್ಗಾನ್‌ಗೆ ಮಾಸ್ ಕ್ವಾರಂಟೈನ್‌ಗೆ ದಾಖಲಿಸಲಾಗಿದೆ.

ಗ್ರಾಮದ ಆಶಾ ಕಾರ್ಯಕರ್ತೆಯರು ಈತನ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯಲ್ಲಿ ಇರದೇ ಸರ್ಕಾರಿ ಕಚೇರಿಗಳಿಗೆ ತೆರಳಿರುವುದು ಬೆಳಕಿಗೆ ಬಂದಿರುತ್ತದೆ. ಈತ ರಾಮನಗರದಿಂದ ಬಂದಿದ್ದು, ಮಾರ್ಚ್‌ 23ರಂದು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.