
ಶಿವಮೊಗ್ಗ: ‘ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ’ ಘೋಷವಾಕ್ಯದಡಿ ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನ. 7ರಿಂದ 10ರವರೆಗೆ ಕೃಷಿ , ತೋಟಗಾರಿಕೆ ಮೇಳ ಗರಿಗೆದರಲಿದೆ.
ಮೇಳದಲ್ಲಿ ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನ, ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣ ಪ್ರದರ್ಶನ, ವಿಜ್ಞಾನಿಗಳು–ರೈತರೊಂದಿಗೆ ಸಂವಾದ ಮತ್ತು ವಿಚಾರ ಗೋಷ್ಠಿಯನ್ನೂ ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಸಿ.ಜಗದೀಶ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೃಷಿ ಮತ್ತು ತೋಟಗಾರಿಕಾ ಬೆಳೆಗಳು, ಸಸಿ ಹಾಗೂ ತಳಿಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ತಂತ್ರಜ್ಞಾನ ಉದ್ಯಾನ, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ಕೃಷಿ– ತೋಟಗಾರಿಕೆ– ಅರಣ್ಯ ಸಮಗ್ರ ಪದ್ಧತಿ, ಕೃಷಿ ಮತ್ತು ತೋಟಗಾರಿಕಾ ವಸ್ತುಪ್ರದರ್ಶನ, ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣ ಪ್ರದರ್ಶನ, ಜೈವಿಕ ಪರಿಕರಗಳ ಪ್ರದರ್ಶನ, ರೈತರು– ವಿಜ್ಞಾನಿಗಳ ಸಂವಾದ ಮತ್ತು ವಿಚಾರ ಗೋಷ್ಠಿ ಏರ್ಪಡಿಸಲಾಗಿದೆ. ಸಿರಿಧಾನ್ಯಗಳ ಮೌಲ್ಯವರ್ಧನೆಗಾಗಿ ಹೆಚ್ಚು ಒತ್ತು ಕೊಟ್ಟು ರೈತರ ಮನಮುಟ್ಟಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ವರ್ಷ ‘ಸಹ್ಯಾದ್ರಿ ಸಿಂಧೂರ’ ಎಂಬ ಸಣ್ಣ ಕೆಂಪಕ್ಕಿ ಭತ್ತದ ತಳಿ ಬಿಡುಗಡೆ ಮಾಡಲಾಗಿದೆ. ಕೆಎಚ್‌ಪಿ– 11 ಭತ್ತದ ತಳಿಯನ್ನು ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯಲು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ವಿ.ವಿ.ಯ ಗ್ರಂಥಪಾಲಕ ಬಿ.ಕೆ. ಶಿವಣ್ಣ, ವಿಸ್ತರಣಾಧಿಕಾರಿ ಡಾ.ಗಿರಿಜೇಶ್, ಡಾ.ದುಷ್ಯಂತಕುಮಾರ್, ಡಾ.ಹೇಮ್ಲಾ ನಾಯ್ಕ, ಡಾ.ತಿಪ್ಪೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.