ಹೊಸನಗರ: ತಾಲ್ಲೂಕಿನ ಬಂಟೋಡಿಯಲ್ಲಿ ಶನಿವಾರ ಮಧ್ಯಾಹ್ನ ಹೊಳೆ ದಾಟುವಾಗ ಉಕ್ಕಡ ಮಗುಚಿ ನೀರು ಪಾಲಾಗಿದ್ದ ಯುವಕನ ಮೃತದೇಹ ಸಿಕ್ಕಿದೆ.
ಸ್ಥಳೀಯ ಕಟ್ಟಿನ ಹೊಳೆ ಗ್ರಾಮದ ಪೂರ್ಣೇಶ (22) ಮೃತ ಯುವಕ.
ಪೂರ್ಣೇಶ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ. ಆತನಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಶನಿವಾರ ಸಂಜೆಯವರೆಗೂ ಹುಡುಕಾಟ ನಡೆಸಿದ್ದರು. ಭಾನುವಾರ ಮುಂಜಾನೆಯಿಂದ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಮಧ್ಯಾಹ್ನ ಮೃತದೇಹ ಸಿಕ್ಕಿದೆ.
ಪೂರ್ಣೇಶ, ಶರತ್ ಹಾಗೂ ರಂಜನ್ ಅವರು ಉಕ್ಕಡದಲ್ಲಿ ತೆರಳುತ್ತಿದ್ದಾಗ ಅದು ಮಗುಚಿತ್ತು. ಪೂರ್ಣೇಶ ನೀರು ಪಾಲಾಗಿದ್ದು, ಶರತ್ ಮತ್ತು ರಂಜನ್ ಈಜಿ ದಡ ಸೇರಿದ್ದರು.
ಗ್ರಾಮಸ್ಥರ ಆಕ್ರೋಶ
ಮುಳುಗಡೆ ಪ್ರದೇಶವಾದ ಚಿಂಚನೂರು ಮತ್ತು ಬಂಟೋಡಿ ನಡುವೆ ಸಂಪರ್ಕ ರಸ್ತೆ ಇಲ್ಲವಾಗಿದೆ. ಕಾಲುಸಂಕ ನಿರ್ಮಿಸುವಂತೆ ಹಲವು ವರ್ಷಗಳಿಂದ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಪ್ರತಿ ಬಾರಿ ಹಿನ್ನೀರು ವ್ಯಾಪಿಸುವ ಸಂದರ್ಭದಲ್ಲಿ ಉಕ್ಕಡದ ಮೂಲಕವೇ ಓಡಾಡುವ ಪರಿಸ್ಥಿತಿ ಇದೆ. ದಶಕಗಳ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದೆ ಇರುವುದರಿಂದ ಈ ದುರಂತ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.