ಹೊಸನಗರ: ನಾಡಿನ ಬೆಳಕಿಗಾಗಿ ಬಹುದೊಡ್ಡ ಕೊಡುಗೆ ನೀಡಿದ ಚಕ್ರಾ–ಸಾವೇಹಕ್ಲು ಅವಳಿ ಜಲಾಶಯಗಳು ಗಮನಾರ್ಹ ಅಭಿವೃದ್ಧಿ ಕಾಣಬೇಕಾಗಿದೆ. ಈ ಪ್ರದೇಶವು ‘ಇಕೋ ಟೂರಿಸಂ’ಗೆ ಹೇಳಿ ಮಾಡಿಸಿದ ಪ್ರದೇಶವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬುಧವಾರ ಚಕ್ರಾ ಮತ್ತು ಸಾವೇಹಕ್ಲು ಅವಳಿ ಜಲಾಶಯಗಳಿಗೆ ಪ್ರಥಮ ಬಾರಿಗೆ ಬಾಗಿನ ಸಮರ್ಪಿಸಿದ ಬಳಿಕ ಮಾತನಾಡಿದರು.
ಈ ಅವಳಿ ಜಲಾಶಯ ಪ್ರದೇಶಗಳು ಪ್ರವಾಸೋದ್ಯಮಕ್ಕೆ ಸೂಕ್ತ ಜಾಗ. ಜನರು ಇಲ್ಲಿನ ಸೌಂದರ್ಯವನ್ನು ಆಸ್ವಾದಿಸಲು ಅವಕಾಶ ಮಾಡಿಕೊಡಬೇಕಿದೆ. ಅದರಲ್ಲೂ ನೀರು ತುಂಬಿರುವ ಸಂದರ್ಭದಲ್ಲಿ ಈ ಪ್ರದೇಶ ಎಲ್ಲರ ಕಣ್ಮನ ಸೆಳೆಯುತ್ತದೆ. ಇದರ ಸಂರಕ್ಷಣೆ ಜೊತೆಗೆ ಅಭಿವೃದ್ಧಿ ಕೂಡ ಅಗತ್ಯವಾಗಿದೆ ಎಂದರು.
ಈ ಜಲಾಶಯಕ್ಕೆ ಹೋಗಲು ಮಾಸ್ತಿಕಟ್ಟೆಯಿಂದ ಪಾಸ್ ತರಬೇಕಿದೆ. ಸ್ಥಳೀಯವಾಗಿಯೇ ಪಾಸ್ ನೀಡಿದರೆ ಜನರಿಗೆ ಅನುಕೂಲವಾಗುತ್ತದೆ. ಕರಿಮನೆ ಗ್ರಾಮ ಪಂಚಾಯಿತಿಯಲ್ಲಿ ಪಾಸ್ ಕೊಡುವ ವ್ಯವಸ್ಥೆ ಮಾಡುವ ಸಂಬಂಧ ಕೆಪಿಸಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.
ಶಾಪವೂ ಹೌದು ವರವೂ ಹೌದು: ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ‘ಇಲ್ಲಿನ ಜಲಾನಯನ ಪ್ರದೇಶ ಅದ್ಭುತವಾಗಿದೆ. ಎಲ್ಲೆಲ್ಲೂ ನೀರು ಕಾಣುತ್ತಿದೆ. ಮಲೆನಾಡಿಗೆ ಈ ನೀರು ಶಾಪವೂ ಹೌದು. ಆದರೆ ದೇಶದ ಪ್ರಾಕೃತಿಕ ಸಂಪನ್ಮೂಲದ ದೃಷ್ಟಿಯಿಂದ ವರವೂ ಹೌದು. ಪ್ರವಾಸೋದ್ಯಮದ ಜೊತೆಗೆ ಉದ್ಯೋಗ ಸೃಷ್ಟಿ ಆಗುವಂತ ಯೋಜನೆಗಳು ರೂಪಿಸಬೇಕಾಗಿದೆ’ ಎಂದರು.
ಶಿವಮೊಗ್ಗ ಶಾಸಕ ಚೆನ್ನಬಸಪ್ಪ, ಶಾಸಕರಾದ ರವಿಕುಮಾರ್, ಡಾ.ಧನಂಜಯ ಸರ್ಜಿ ಮಾತನಾಡಿದರು.
ತಹಶೀಲ್ದಾರ್ ರಶ್ಮಿ ಹಾಲೇಶ್, ವಾರಾಹಿ ಯೋಜನೆ ಕಾಮಗಾರಿ ವಿಭಾಗದ ಪ್ರಭಾರ ಅಧೀಕ್ಷಕ ಎಂಜಿನಿಯರ್ ಪ್ರಕಾಶ ಬ್ರಹ್ಮಾವರ್, ವಿದ್ಯುತ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಮಹೇಶ್ ಬಿ.ಸಿ, ಕಾಮಗಾರಿ ವಿಭಾಗದ ಎಇಇ ಸುದೀಪ್, ಭದ್ರತಾ ಅಧಿಕಾರಿ ಸದಾಶಿವ, ಕರಿಮನೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಕೆ.ವಿ.ಸುಬ್ರಹ್ಮಣ್ಯ, ಎನ್.ವೈ.ಸುರೇಶ್, ಹಾಲಗದ್ದೆ ಉಮೇಶ್, ಕೆ.ವಿ.ಕೃಷ್ಣಮೂರ್ತಿ, ರಮಾನಂದ್, ಬಂಕ್ರಿಬೀಡು ಮಂಜುನಾಥ್, ರಾಜೇಶ ಹಿರಿಮನೆ, ಮೋಹನ ಮಂಡಾನಿ, ನಗರ ನಿತಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.