ADVERTISEMENT

ಭರ್ತಿಯತ್ತ ಮಾಣಿ ಜಲಾಶಯ

ಜಲಾಶಯಕ್ಕೆ ಭಾರಿ ಪ್ರಮಾಣದ ನೀರಿನ ಹರಿವು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 5:40 IST
Last Updated 15 ಸೆಪ್ಟೆಂಬರ್ 2024, 5:40 IST
ಹೊಸನಗರ ತಾಲ್ಲೂಕಿನ ಮಾಣಿ ಜಲಾಶಯದ ನೋಟ
ಹೊಸನಗರ ತಾಲ್ಲೂಕಿನ ಮಾಣಿ ಜಲಾಶಯದ ನೋಟ   

ಹೊಸನಗರ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಮಾಣಿ ಜಲಾಶಯ ಭರ್ತಿ ಹಂತ ತಲುಪಿದೆ. ಜಲಾಶಯದಲ್ಲಿ 592 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಗರಿಷ್ಠ ಮಟ್ಟ 594.36 ಮೀಟರ್.

ಜಲಾಶಯ ಸಂಪೂರ್ಣ ಭರ್ತಿಯಾಗಲು ಇನ್ನು ಕೇವಲ 2.36 ಮೀ. ಬಾಕಿ ಇದ್ದು, ನೀರಿನ ಒಳಹರಿವು ಹೀಗೆಯೇ ಮುಂದುವರಿದಲ್ಲಿ ಜಲಾಶಯ ಭರ್ತಿ ಆಗುವ ಭರವಸೆ ಮೂಡಿಸಿದೆ.

ಜಲಾನಯನ ಪ್ರದೇಶದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಈ ಭಾಗದಲ್ಲಿ ಆಗಾಗ ವರ್ಷಧಾರೆಯಾಗುತ್ತಿರುವ ಪರಿಣಾಮ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ದಿನದಿನವೂ ನೀರಿನ ಸಂಗ್ರಹ ಮಟ್ಟ ಏರುತ್ತಿದೆ.

ADVERTISEMENT

ವಿಶಿಷ್ಟ ಜಲಾಶಯ:

ಯಡೂರ ಬಳಿ ಹರಿಯುವ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಮಾಣಿ ಜಲಾಶಯ ವಿಶೇಷ ಮತ್ತು ವಿಶಾಲವಾದ ಜಲಾಶಯ. ಜಲಾಶಯವನ್ನು ವಿಶಿಷ್ಟವಾದ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಮಾಣಿ ಒಡಲು ತುಂಬಿ ಭರ್ತಿಯಾಗುವುದು ಅಪರೂಪ. ಮಳೆಗಾಲದ ದಿನಗಳಲ್ಲಿ ಈ ಭಾಗದಲ್ಲಿ ಭಾರಿ ಪ್ರಮಾಣದ ಮಳೆಯಾಗಿ ಸುತ್ತಲಿನ ಜಲಾನಯನ ಪ್ರದೇಶದಲ್ಲಿ 700 ಸೆಂ.ಮೀಗೂ ಹೆಚ್ಚು ಮಳೆಯಾದರೆ ಮಾತ್ರ ಜಲಾಶಯದ ಭರ್ತಿ ಸಾಧ್ಯ.

ಈ ಬಾರಿಯ ಮಳೆಗಾಲದಲ್ಲಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಜುಲೈ ಅಂತ್ಯದಲ್ಲೇ 586 ಮೀಟರ್ ನೀರು ಸಂಗ್ರಹವಾಗಿ, ಈ ಭಾಗದ ಜನರಲ್ಲಿ ಸಂತಸ ತಂದಿತ್ತು.

ಮಾಣಿಯಲ್ಲಿ ಮಳೆ ಹೆಚ್ಚು:

ಮಾಣಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದ ಮಳೆ ಆಗಿದೆ. ಪ್ರತಿ ದಿನವೂ 15 ಸೆಂ.ಮೀ. ಸರಾಸರಿ ಮಳೆ ಸುರಿದಿದೆ. ಮಾಣಿ ಸುತ್ತಲಿನ ಪ್ರದೇಶಗಳಲ್ಲಿ ಈವರೆಗೆ 620 ಸೆಂ.ಮೀ.ನಿಂದ 755 ಸೆಂ.ಮೀ. ಮಳೆ ದಾಖಲಾಗಿದೆ.

ವಾರಾಹಿ ಯೋಜನಾ ಪ್ರದೇಶದ ಯಡೂರು, ಸುಣ್ಣದಮನೆ, ಮತ್ತಿಗಾ, ಮೇಲಸುಂಕಾ, ಮೇಗರವಳ್ಳಿ, ಗಿಣಿಕಲ್, ಯಡೂರು, ಹೆಬ್ಬಾಗಿಲು ಭಾಗದಲ್ಲಿ ಪ್ರತಿನಿತ್ಯ ಉತ್ತಮ ಮಳೆ ಸುರಿದಿದೆ. ಹುಲಿಕಲ್‌ನಲ್ಲಿ 755.9 ಸೆಂ.ಮೀ. ಮಾಸ್ತಿಕಟ್ಟೆಯಲ್ಲಿ 753.7 ಸೆಂ.ಮೀ, ಚಕ್ರಾದಲ್ಲಿ 725.7 ಸೆಂ.ಮೀ., ಸಾವೇಹಕ್ಲು ಪ್ರದೇಶದಲ್ಲಿ 673.2 ಸೆಂ.ಮೀ ಮಳೆಯಾಗಿದೆ. ಕಳೆದ ವರ್ಷ ಈ ಭಾಗದಲ್ಲಿ 420 ಸೆಂ.ಮೀಗಿಂತ ಕಡಿಮೆ ಮಳೆಯಾಗಿತ್ತು.

ಹೊಸನಗರ ತಾಲ್ಲೂಕಿನ ಮಾಣಿ ಜಲಾಶಯ

34 ವರ್ಷದಲ್ಲಿ ತುಂಬಿದ್ದು 4 ಬಾರಿ

594.36 ಮೀ. ಗರಿಷ್ಠ ಮಟ್ಟ ಹೊಂದಿರುವ ಮಾಣಿ ಜಲಾಶಯ 34 ವರ್ಷಗಳಲ್ಲಿ ನಾಲ್ಕು ವರ್ಷ ಮಾತ್ರ ತುಂಬಿದೆ. ಜಲಾಶಯ ಭರ್ತಿ ಆಗವುದೇ ಒಂದು ಸೊಜಿಗ. ಜುಲೈ ಮತ್ತು ಆಗಸ್ಟ್‌ನಲ್ಲಿ ಭಾರಿ ಮಳೆ ಆದರೆ ಮಾತ್ರ ತುಂಬುವ ಸಾಧ್ಯತೆ ಇದೆ. ಹೀಗೆಯೇ ಮಳೆ ಅಬ್ಬರ ಮುಂದುವರಿದರೆ ಮಾತ್ರ ತುಂಬುವ ಸಾಧ್ಯತೆ ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ಅನಂತಮೂರ್ತಿ ಶೆಣೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.