ಹೊಸನಗರ: ಭರ್ತಿಯಾಗಿ ತುಂಬಿ ತುಳುಕುತ್ತಿರುವ ಚಕ್ರಾ ಮತ್ತು ಸಾವೇಹಕ್ಲು ಅವಳಿ ಜಲಾಶಯಗಳಿಗೆ ತಾಲ್ಲೂಕು ಆಡಳಿತ ಹಾಗೂ ಕರಿಮನೆ ಗ್ರಾಮ ಪಂಚಾಯಿತಿಯಿಂದ ಶುಕ್ರವಾರ ಬಾಗಿನ ಅರ್ಪಿಸಲಾಯಿತು.
‘ನಾಡಿನ ಬೆಳಕಿಗಾಗಿ ಸೇವೆ ಗೈದಿರುವ ಎರಡು ಜಲಾಶಯಗಳಿಗೆ ಬಾಗಿನ ಸಲ್ಲಿಸುವ ಅವಕಾಶ ಸಿಕ್ಕಿರುವುದಕ್ಕೆ ಧನ್ಯತೆ ಸಿಕ್ಕಿದೆ. ಇದೊಂದು ಅಪೂರ್ಣ ತಾಣ’ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ಹೇಳಿದರು.
ಕೊಡಚಾದ್ರಿ ಪದವಿ ಕಾಲೇಜು ಸಮಿತಿ ಉಪಾಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ‘ಅವಳಿ ಜಲಾಶಯ ವೀಕ್ಷಣೆಗೆ ಸ್ಥಳೀಯ ಮಟ್ಟದಲ್ಲೇ ಪಾಸ್ ನೀಡಬೇಕು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಮನವಿ ಮಾಡಿದರು.
ಕೆಪಿಸಿ ಸಹಾಯಕ ಎಂಜನಿಯರ್ (ಗೇಟ್) ವಿನಯಕುಮಾರ ಕೆ, ‘ಅವಳಿ ಡ್ಯಾಂ ವೀಕ್ಷಣೆಗೆ ಸಂಬಂಧಿಸಿ ಸ್ಥಳೀಯವಾಗಿ ಪಾಸ್ ನೀಡುವ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.
ಸಂಭ್ರಮ: ದೇವಿಯ ಮೂರ್ತಿ ಇಟ್ಟು ಸಿಂಗರಿಸಿ ಬಾಗಿನವನ್ನು ನೀರಿನಲ್ಲಿ ತೇಲಿ ಬಿಡುತ್ತಿದ್ದಂತೆ ನೆರದವರಲ್ಲಿ ಸಂಭ್ರಮ ಮನೆಮಾಡಿತು. ಕರಿಮನೆ ಮಹಿಳೆಯರು, ತಾಲ್ಲೂಕು ನೌಕರರು ಭಾಗವಹಿಸಿದ್ದರು.
ಕರಿಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಗೋಪಾಲ್, ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ, ಕರವಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಕೆಪಿಸಿ ಅಧಿಕಾರಿಗಳಾದ ಓಂಕಾರಪ್ಪ, ಹೊಂಬೇಗೌಡ, ಬಿಇಒ ಕೃಷ್ಣಮೂರ್ತಿ, ರತ್ನಾಕರ ಗೌಡ, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಸತೀಶ್ ಪಟೇಲ್, ಶಾಸಕ ಬೇಳೂರು ಆಪ್ತ ಸಹಾಯಕ ಸಣ್ಣಕ್ಕಿ ಮಂಜು, ದೇವೇಂದ್ರ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.