ADVERTISEMENT

ಶರಾವತಿಯೊಂದಿಗೆ ನೆಂಟಸ್ತನ, ಇಲ್ಲಿ ಬೆಳಕಿಗೆ ಬಡತನ!

ಹೊಸನಗರ: 10 ವರ್ಷಗಳಿಂದ ನನೆಗುದಿಗೆ ಬಿದ್ದ 110 ಕೆ.ವಿ ವಿದ್ಯುತ್ ವಿತರಣಾ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 5:34 IST
Last Updated 2 ಮೇ 2025, 5:34 IST
ಹೊಸನಗರ ಪಟ್ಟಣದ ಬಸ್ ನಿಲ್ದಾಣದ ನೋಟ
ಹೊಸನಗರ ಪಟ್ಟಣದ ಬಸ್ ನಿಲ್ದಾಣದ ನೋಟ   

ಶಿವಮೊಗ್ಗ: ಬೇಸಿಗೆಯಲ್ಲಿ ಓವರ್‌ಲೋಡ್‌, ಮಳೆಗಾಲದಲ್ಲಿ ಮರ ಬಿದ್ದು ಮೇನ್‌ ಸಪ್ಲೇ ಬಂದ್‌. ಹೀಗೆ ವರ್ಷವಿಡೀ ದಿನ–ವಾರಗಳ ಲೆಕ್ಕದಲ್ಲಿ ವಿದ್ಯುತ್ ವ್ಯತ್ಯಯ..!

ಶರಾವತಿ ಹಿನ್ನೀರನ್ನು ಒಡಲಲ್ಲಿ ಸಂಗ್ರಹಿಸಿಟ್ಟುಕೊಂಡು ಇಡೀ ನಾಡಿಗೆ ಬೆಳಕು ಕೊಟ್ಟರೂ, ಹೊಸನಗರ ಪಟ್ಟಣ ಹಾಗೂ ತಾಲ್ಲೂಕಿನ ನಿವಾಸಿಗಳ ದೀಪದ ಕೆಳಗಿನ ಕತ್ತಲೆಯ ಕಥನ ಇದು.

ಹೊಸನಗರ ತಾಲ್ಲೂಕಿನಲ್ಲಿ ಸದ್ಯ ಕೆಪಿಟಿಸಿಎಲ್ 33 ಕೆ.ವಿ. ವಿದ್ಯುತ್ ಪ್ರಸರಣ ವ್ಯವಸ್ಥೆ ಹೊಂದಿದೆ. ಅದೂ ಸಾಗರದಿಂದ ಪೂರೈಕೆ ಆಗುತ್ತಿದೆ. ಇದಕ್ಕಾಗಿ ಸಾಗರ– ಹೊಸನಗರ ನಡುವೆ 40 ಕಿ.ಮೀ. ದೂರ ಕಂಬಗಳ ಮೂಲಕ ಲೈನ್ ಎಳೆಯಲಾಗಿದೆ.

ADVERTISEMENT

ವರ್ಷವಿಡೀ ತೊಂದರೆ:

ಹೊಸನಗರ ತಾಲ್ಲೂಕು 40 ವರ್ಷಗಳ ಹಿಂದೆ 11 ಕೆ.ವಿ.ಯಿಂದ 33 ಕೆ.ವಿ. ವಿದ್ಯುತ್ ವ್ಯವಸ್ಥೆಗೆ ಮೇಲ್ದರ್ಜೆಗೇರಿದೆ. ಈಗ ಹೊಸನಗರ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ವಿದ್ಯುತ್‌ ಬಳಕೆದಾರರ ಸಂಖ್ಯೆ 54,400ಕ್ಕೆ ಏರಿಕೆ ಆಗಿದ್ದು, ಬೇಸಿಗೆಯಲ್ಲಿ (ಫೆಬ್ರುವರಿಯಿಂದ ಮೇ ಅಂತ್ಯ) ಬೇಡಿಕೆ ಹೆಚ್ಚಿ ತಾಂತ್ರಿಕವಾಗಿ ಅಷ್ಟು ವಿದ್ಯುತ್‌ ಪೂರೈಕೆ ಕಷ್ಟವಾಗುತ್ತಿದೆ.

ಇನ್ನು ಸಾಗರದಿಂದ ಹೊಸನಗರಕ್ಕೆ ವಿದ್ಯುತ್ ಲೈನ್‌ ಕಾಡಿನಲ್ಲಿ ಹಾದುಬಂದಿದೆ. ಮಳೆಗಾಲದಲ್ಲಿ ಗಾಳಿ– ಮಳೆಗೆ ಮರ ಇಲ್ಲವೇ ಮರದ ಕೊಂಬೆ ಮುರಿದು ಬಿದ್ದರೂ ಮೇನ್‌ ಸಪ್ಲೇ ಬಂದ್ ಆಗುತ್ತದೆ. ಸ್ಥಳ ಗುರುತಿಸಿ ಅದನ್ನು ಸರಿಪಡಿಸಿ ಮತ್ತೆ ವಿದ್ಯುತ್ ಪೂರೈಕೆಗೆ ದಿನಗಟ್ಟಲೇ ಸಮಯ ಆಗುತ್ತಿದೆ. ಮಳೆ ತೀವ್ರಗೊಂಡಾಗ ಅದು ಕೆಲವೊಮ್ಮೆ ನಾಲ್ಕಾರು ದಿನ ಆಗಲಿದೆ. ಅಲ್ಲಿಯವರೆಗೆ ಜನಜೀವನ ಅಸ್ತವ್ಯಸ್ತ.

ಇನ್ನು ಮಳೆಗಾಲ ಶುರುವಾಗಲಿದೆ. ಒಮ್ಮೆ ಮೇನ್‌ ಲೈನ್‌ ಮೇಲೆ ಮರ ಬಿದ್ದರೆ ಹೊಸನಗರ ಪಟ್ಟಣ ಮಾತ್ರವಲ್ಲ ತಾಲ್ಲೂಕು ಕೇಂದ್ರ ಶೇ 40ರಷ್ಟು ಭಾಗ ಕತ್ತಲೆಯಲ್ಲಿ ಮುಳುಗುತ್ತದೆ. ಕೋಡೂರು, ಮಾರುತಿಪುರ, ಹುಂಚ, ಸೊನಲೆ, ನಾಗರಕೂಡಿಗೆ, ಬಿಲ್ಲೋಡಿ, ಜಯನಗರ, ಕಾಳಿಕಾಪುರ ಬಟ್ಟೆಮಲ್ಲಪ್ಪ ಸೇರಿ 10ರಿಂದ 15 ಗ್ರಾಮ ಪಂಚಾಯಿತಿಗಳು ಕತ್ತಲೆಯಲ್ಲಿ ಮುಳುಗಲಿವೆ.

ನನೆಗುದಿಗೆ ಬಿದ್ದ ಯೋಜನೆ:

ಹೊಸನಗರ ತಾಲ್ಲೂಕಿನಲ್ಲಿ ಈಗಿರುವ 33 ಕೆ.ವಿ. ಬದಲಿಗೆ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪೂರೈಕೆಗೆ 2015ರಲ್ಲಿ ಯೋಜನೆ ರೂಪಿಸಲಾಗಿತ್ತು. ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸನಗರರಕ್ಕೆ ವಿದ್ಯುತ್ ಒಯ್ಯಲು ತೀರ್ಮಾನಿಸಲಾಗಿತ್ತು. 40 ಕಿ.ಮೀ. ದೂರದ ಈ ಲೈನ್ ಹಾದು ಬರುವ ಹಾದಿಯಲ್ಲಿ 18 ಹೆಕ್ಟೇರ್‌ನಷ್ಟು ಅರಣ್ಯ ಭೂಮಿ, ಅದರಲ್ಲೂ ವನ್ಯಜೀವಿ ವಲಯ ಇದೆ. ಅದಕ್ಕೆ ಕೇಂದ್ರದ ಅರಣ್ಯ ಸಚಿವಾಲಯದಿಂದ ಅನುಮತಿ ಸಿಗದೇ ಯೋಜನೆ ನನೆಗುದಿಗೆ ಬಿದ್ದಿದೆ. ವಿಶೇಷವೆಂದರೆ ಹೊಸನಗರಕ್ಕೆ ಯೋಜನೆ ರೂಪಿಸಿದಾಗಲೇ ರಿಪ್ಪನ್‌ಪೇಟೆಗೂ ಯೋಜನೆ ರೂಪಿಸಲಾಗಿತ್ತಾದರೂ ಅಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಮೇಲ್ದರ್ಜೆಗೇರಿ ಐದು ವರ್ಷ ಕಳೆದಿದೆ.

ಹೊಸ ಯೋಜನೆಗೆ ಸಿದ್ಧತೆ:

ಕೋಣಂದೂರಿನಿಂದ ಹೊಸನಗರಕ್ಕೆ ಲೈನ್ ಎಳೆಯುವುದು ಕಾರ್ಯಸಾಧುವಲ್ಲ ಎಂದು ನಿರ್ಧರಿಸಿರುವ ಕೆಪಿಟಿಸಿಎಲ್‌ ಹೊಸನಗರ ತಾಲ್ಲೂಕಿನ ಗರ್ತಿಕೆರೆ ಬಳಿಯ ಅಮೃತ ಗ್ರಾಮದಲ್ಲಿ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸುತ್ತಿದೆ. ಅಲ್ಲಿಂದ 40 ಟವರ್‌ ಅಳವಡಿಸಿ ಹೊಸನಗರದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಲೈನ್ ಎಳೆಯಲು ಯೋಜಿಸಲಾಗಿದೆ. 18 ಕಿ.ಮೀ. ದೂರದ ಈ ಹಾದಿಯಲ್ಲಿ 7 ಹೆಕ್ಟೇರ್‌ನಷ್ಟು ಮಾತ್ರ ಅರಣ್ಯ ಭೂಮಿ ಬರುತ್ತದೆ. ಇದಕ್ಕೆ ಅನುಮತಿ ಸಿಗಲಿದೆ ಎಂಬುದು ಮೆಸ್ಕಾಂ ಅಧಿಕಾರಿಗಳ ವಿಶ್ವಾಸ.

ವಿದ್ಯುತ್‌ ಪೂರೈಕೆ ವ್ಯವಸ್ಥೆ ಮೇಲ್ದರ್ಜೆಗೇರಿದರೆ ಹೊಸನಗರ ತಾಲ್ಲೂಕಿನ ಕತ್ತಲೆ ಸಮಸ್ಯೆಗೆ ಶಾಶ್ವತವಾಗಿ ಬೆಳಕು ದೊರೆಯಲಿದೆ. ಬೇಸಿಗೆಯಲ್ಲಿ ಓವರ್‌ಲೋಡ್ ಸಮಸ್ಯೆ ಇರುವುದಿಲ್ಲ. 110 ಕೆ.ವಿ. ಟವರ್‌ ಸುತ್ತಲೂ 35 ಮೀಟರ್ ಜಾಗ ಬಿಡಬೇಕಿದೆ. ಎತ್ತರದಲ್ಲಿ ಲೈನ್ ಹೋಗುತ್ತದೆ. ಇದರಿಂದ ಮಳೆಗಾಲದಲ್ಲಿ ಮರ ಬಿದ್ದು ವಿದ್ಯುತ್ ವ್ಯತ್ಯಯ ಆಗುವ ಫಜೀತಿ ಇರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಅಮೃತ ಬಳಿ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಪ್ರಸ್ತಾವ ಅರಣ್ಯಭವನದಲ್ಲಿದೆ. ಅನುಮತಿ ಸಿಕ್ಕ ನಂತರ ಟೆಂಡರ್ ಕರೆದು ಹೊಸನಗರಕ್ಕೂ ಸರ್ವೆ ಕಾರ್ಯ ಆರಂಭಿಸಲಿದ್ದೇವೆ
ಚಂದ್ರಶೇಖರ್ ಕಾರ್ಯನಿರ್ವಾಹಕ ಎಂಜಿನಿಯರ್ ಮೆಸ್ಕಾಂ ಸಾಗರ
ಅಮೃತ ಬಳಿಯ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಅರಣ್ಯ ಇಲಾಖೆ ಶೀಘ್ರ ಅನುಮತಿ ಕೊಡಲಿದೆ. ಅರಣ್ಯ ಕೆಪಿಟಿಸಿಎಲ್‌ ಅಧಿಕಾರಿಗಳೊಂದಿಗೆ ಖುದ್ದಾಗಿ ನಾನೇ ಸಂಪರ್ಕದಲ್ಲಿದ್ದು ಫಾಲೊಅಪ್ ಮಾಡುತ್ತಿದ್ದೇನೆ
ಬೇಳೂರು ಗೋಪಾಲಕೃಷ್ಣ ಸಾಗರ ಶಾಸಕ

ವ್ಯಾಪಾರ– ವಹಿವಾಟಿಗೆ ಧಕ್ಕೆ: ವಿಜೇಂದ್ರ ಶೇಟ್

ಒಂದು ಬಾರಿ ಗಾಳಿ– ಮಳೆಗೆ ಮರ ಬಿದ್ದರೆ ತಾಲ್ಲೂಕಿನಲ್ಲಿ ಎರಡು ದಿನ ಕರೆಂಟ್ ಇರುವುದಿಲ್ಲ. ಇದರಿಂದ ಹೊಸನಗರ ಪಟ್ಟಣದಲ್ಲಿ ವ್ಯಾಪಾರ– ವಹಿವಾಟಿನ ಮೇಲೆ ತೀವ್ರ ಪರಿಣಾಮ ಆಗುತ್ತಿದೆ ಎಂದು ಅಲ್ಲಿನ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್ ಬೇಸರ ವ್ಯಕ್ತಪಡಿಸುತ್ತಾರೆ. ‘ಸರ್ಕಾರಿ ಕಚೇರಿಗಳಲ್ಲಿ ಕಂಪ್ಯೂಟರ್ ಆನ್ ಆಗೊಲ್ಲ. ಸರ್ವರ್ ಡೌನ್ ಆಗುತ್ತದೆ. ಪಹಣಿ ಛಾಪಾ ಕಾಗದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ತಾಲ್ಲೂಕು ಕೇಂದ್ರಕ್ಕೆ ಬರುವ ಗ್ರಾಮೀಣರು ಬರಿಗೈಲಿ ವಾಪಸ್ ಹೋಗುತ್ತಾರೆ. ಆಸ್ಪತ್ರೆಗಳಿಗೂ ತೊಂದರೆ ಆಗುತ್ತಿದೆ. ಇನ್‌ವರ್ಟರ್ ಜನರೇಟರ್ ಎಲ್ಲರಿಗೂ ತೆಗೆದುಕೊಳ್ಳಲು ಆಗೊಲ್ಲ. ಪಟ್ಟಣದ ಪರಿಸ್ಥಿತಿಯೇ ಹೀಗಾದರೆ ಇನ್ನು ಗ್ರಾಮೀಣರ ಸ್ಥಿತಿಗತಿ ಏನು?’ ಎಂದು ಪ್ರಶ್ನಿಸುತ್ತಾರೆ. ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೇರಿಸುವಂತೆ ಮೆಸ್ಕಾಂಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಪ್ರತಿಭಟನೆ ಕೂಡ ನಡೆಸಿದ್ದೇವೆ. ಫಲ ದೊರಕಿಲ್ಲ. ಈಚೆಗೆ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇವೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.