ADVERTISEMENT

ಕೊಡಚಾದ್ರಿ ಗಿರಿ ಶಿಖರಕ್ಕೆ ಭೇಟಿ ನೀಡಿದ ಶೃಂಗೇರಿ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 16:21 IST
Last Updated 23 ಫೆಬ್ರುವರಿ 2024, 16:21 IST
ಹೊಸನಗರ ತಾಲ್ಲೂಕು ಕೊಡಚಾದ್ರಿ ಗಿರಿ ಶಿಖರ ವೀಕ್ಷಿಸಿದ ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ
ಹೊಸನಗರ ತಾಲ್ಲೂಕು ಕೊಡಚಾದ್ರಿ ಗಿರಿ ಶಿಖರ ವೀಕ್ಷಿಸಿದ ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ    

ಹೊಸನಗರ: ‘ಶಂಕರಾಚಾರ್ಯರ ಶಿಷ್ಯ ಪರಂಪರೆಯ ನಾಲ್ಕು ಪ್ರಧಾನ ಮಠಗಳಲ್ಲಿ ಶೃಂಗೇರಿ ಮಠ ಕೂಡ ಒಂದಾಗಿದ್ದು, ಶಂಕರಾಚಾರ್ಯರಿಂದ ಮಹತ್ವ ಪಡೆದ ಕೊಡಚಾದ್ರಿ ದರ್ಶನ ಭಕ್ತರ ಅಪೇಕ್ಷೆಯಲ್ಲದೇ ನಮ್ಮ ಅಪೇಕ್ಷೆ ಕೂಡ ಆಗಿತ್ತು’ ಎಂದು ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಈಚೆಗೆ ಕೊಡಚಾದ್ರಿ ಗಿರಿಗೆ ಭೇಟಿ ನೀಡಿದ ಅವರು, ಪರ್ವತೇಶ್ವರ, ಹುಲಿರಾಯ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ನೆರವೇರಿಸಿದರು. ಬಳಿಕ ಸರ್ವಜ್ಞ ಪೀಠಕ್ಕೆ ತೆರಳಿ ವೀಕ್ಷಿಸಿದರು.

‘ಶಂಕರಾಚಾರ್ಯರು ಕೊಡಚಾದ್ರಿಗೆ ಬಂದು ದೇವಿಯನ್ನು ಸಾಕ್ಷಾತ್ಕರಿಸಿಕೊಂಡ ಪುರಾಣ ಪ್ರಸಿದ್ಧ ಸ್ಥಳವಿದು. ಶೃಂಗೇರಿ ಮಠ ಕೂಡ ಶಂಕರಾಚಾರ್ಯರ ಶಿಷ್ಯ ಪರಂಪರೆಗೆ ಸೇರಿದೆ. ಹಿಂದಿನ ಗುರುಗಳು ಕೂಡ ಕೊಡಚಾದ್ರಿ ಗಿರಿಗೆ ಭೇಟಿ ನೀಡಿದ್ದರು. ನಮಗು ಕೂಡ ಈ ಅಪೇಕ್ಷೆ ಇತ್ತು’ ಎಂದರು.

ADVERTISEMENT

ಸನಾತನ ಭವ್ಯ ಪರಂಪರೆಗೆ ಶಂಕರಾಚಾರ್ಯರ ಕೊಡುಗೆ ಅನನ್ಯ. ಅವರು ಇಲ್ಲಿಯ ಸರ್ವಜ್ಞ ಪೀಠದಲ್ಲಿ ಧ್ಯಾನಾಸಕ್ತರಾಗಿದ್ದು, ಮಹತ್ವ ಪಡೆದುಕೊಂಡಿದೆ ಎಂದರು.

ಗಿರಿಯ ದೇಗುಲಗಳ ದರ್ಶನ ಮಾಡಿದ ಬಳಿಕ ಸರ್ವಜ್ಞ ಪೀಠಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ವಿಧುಶೇಖರ ಸ್ವಾಮೀಜಿ, ಗಣಪತಿ ಗುಹೆಗೂ ಭೇಟಿ ನೀಡಿದರು. ಕೊಡಚಾದ್ರಿಯ ಪ್ರಾಕೃತಿಕ ಶ್ರೀಮಂತಿಕೆಯನ್ನು ಕೆಲಕಾಲ ಸವಿದರು.

ಕೊಡಚಾದ್ರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಪದಮನೆ ಶಿವರಾಮಶೆಟ್ಟಿ, ಸದಸ್ಯರಾದ ಪವಿತ್ರ ಭಟ್, ಶರಾವತಿ, ಸುವರ್ಣ, ಗಿರೀಶ್, ಗಣಪತಿ, ರವಿ, ಅರ್ಚಕರು, ಸ್ಥಳೀಯ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.